ವಿಶ್ವ ಯೋಗ ದಿನಾಚರಣೆ ಯಶಸ್ವಿಗೊಳಿಸಲು ವೀಣಾ ಕರೆ

ವಿಶ್ವ ಯೋಗ ದಿನಾಚರಣೆ ಯಶಸ್ವಿಗೊಳಿಸಲು ವೀಣಾ ಕರೆ

ಬಾಗಲಕೋಟೆ ಜೂ.16:  ಜೂನ್ 21 ವಿಶ್ವ ಯೋಗ ದಿನಾಚರಣೆ ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು, ಯೋಗಾ ಆಸಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

    ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯೋಗ ಇದು ಭಾರತೀಯ ಕಲೆಯಾಗಿದ್ದು, ದೇಹ ಮತ್ತು ಮನಸ್ಸು ಸದೃಡಗೊಳಿಸಲು ಯೋಗ ಪ್ರತಿಯೊಬ್ಬರಿಗೂ ಅವಶ್ಯವಾಗಿದ್ದು, ಇದನ್ನು ಪ್ರತಿನಿತ್ಯ ಯೋಗ ಮಾಡಿ, ದಿನವೀಡಿ ಚೈತನ್ಯ ಶೀಲರಾಗಬೇಕೆಂದು ತಿಳಿಸಿದರು. ಯೋಗದಿಂದ ಮನಸ್ಸು, ಆಸನದಿಂದ ಶರೀರ ಸದೃಡವಾಗುವದರಿಂದ ಇದಕ್ಕೆ ಯೋಗಾಸವೆಂದು ಕರೆಯಲ್ಪಟ್ಟಿದ್ದು ಹಿಂದಿನ ಋಷಿ ಮುನಿಗಳು ಕಠಿಣವಾಗಿ ಯೋಗಾಸನ ಮಾಡಿ ನೂರಾರು ವರ್ಷ ಆರೋಗ್ಯಯುತವಾಗಿ ಬದುಕಿದ್ದರು ಎಂದು ಇತಿಹಾಸದಿಂದ ತಿಳಿಯುತ್ತದೆ ಎಂದರು.

    ಪತಂಜಲಿ ಋಷಿಗಳು ಕಠಿಣವಾದ ಯೋಗವನ್ನು ಸರಾಗಗೊಳಿಸಿ ಪ್ರತಿಯೊಬ್ಬರಿಗೂ ಯೋಗ ಸರಳವಾಗಿ ಹಾಗೂ ಸುಲಭವಾಗಿ ಆಚರಿಸುವಂತೆ ಕ್ರಮಗಳನ್ನು ಕಂಡು ಹಿಡಿದಿದ್ದರಿಂದ ಯೋಗ ಪಿತಾಮಹನೆಂದು ಕರೆಸಿಕೊಂಡಿದ್ದಾರೆ. ಪತಂಜಲಿ ಯೋಗ ಶ್ರೀಸಾಮಾನ್ಯನು ಕೂಡ ಯಾವುದೇ ತೊಂದರೆ ಇಲ್ಲದೇ ಆಚರಿಸುತ್ತಾ ಬಂದಲ್ಲಿ ರೋಗ ಮುಕ್ತ ಬದುಕು ಸಾಗಿಸಲು ಸಾದ್ಯವಾಗಿದೆ ಎಂದರು. ದಿನದ 24 ಗಂಟೆಯಲ್ಲಿ ಮುಂಜಾನೆಯ ಒಂದು ಗಂಟೆ ಯೋಗಕ್ಕಾಗಿ ಮೀಸಲಿಟ್ಟು ದಿನವೀಡಿ ಬೇಸರ ಮತ್ತು ಆಲಸ್ಯ ರಹಿತ ಕಾರ್ಯನಿರ್ವಹಿಸಬಹುದೆಂದರು. 

    ತಾವು ಸ್ವತಃ ಪ್ರತಿದಿನ ಕೆಲವೇ ಕೆಲವು ಆಸನಗಳನ್ನೊಂದಿಗೆ ಯೋಗ ಮಾಡುತ್ತಿದ್ದು, ಯೋಗದಿನಾಚರಣೆ ದಿನದಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗದ ಸಂಪೂರ್ಣ ಮಾಹಿತಿ ಹಾಗೂ ಜ್ಞಾನ ಪಡೆದುಕೊಂಡು ಪ್ರತಿನಿತ್ಯ ಯೋಗ ಮಾಡಬೇಕೆಂಬ ನಿರ್ಣಯ ತೆಗೆದುಕೊಂಡಿದ್ದೇನೆ ಎಂದರು. ಯೋಗ ಕಲಿಯಲು ವಿದೇಶದಲ್ಲಿ ಸಾಕಷ್ಟು ಹಣ ವೆಚ್ಚಮಾಡಿದ್ದು, ನಮ್ಮ ರಾಷ್ಟ್ರೀಯ ವಿದ್ಯೆ ಉಚಿತವಾಗಿ ದೊರಕುತ್ತಿದ್ದು, ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. 

    ವೈದ್ಯ ಡಾ.ಚಂದ್ರಕಾಂತ  ರಕ್ಕಸಗಿ ಮಾತನಾಡಿ ಯೋಗದಿಂದ ಮಾನಸಿಕ ದೃಡತೆ, ಸ್ಮರಣ ಶಕ್ತಿ, ಏಕಾಗ್ರತೆ ಹೆಚ್ಚಾಗುತ್ತಿದ್ದು, ದೇಹ ಹಾಗೂ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದ್ದು, ವಿವಿಧ ಆಸನಗಳ ಅಭ್ಯಾಸವು ದೇಹದ ಮಾಂಸ ಖಂಡಿ ನರನಾಡಿಗಳನ್ನು ಬಲಗೊಳಿಸಿ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಯೋಗಾಬ್ಯಾಸದಿಂದ ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಾಗಿ ರೋಗಮುಕ್ತ ಜೀನವ ಸಾಗಿಸಲು ಸಹಕಾರಿಯಾಗಿದೆ ಎಂದರು. 

    ಪತ್ರಿಕಾಗೋಷ್ಠಿಯಲ್ಲಿ ಉಜಿರೆಯ  ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಯೋಗ ವೈದ್ಯ ವಿದ್ಯಾರ್ಥಿಗಳಾದ ಅನಿಕೇತನ ಮತ್ತು ಚೇತನ ಉಪಸ್ಥಿತರಿದ್ದರು.