ರೂ.93.33 ಕೋಟಿ ವೆಚ್ಚದ ನಗರದ ಕುಡಿಯುವ ನೀರಿನ ಕಾಮಗಾರಿಗೆ ಅನುಮೋದನೆ : ಎಂ.ಬಿ.ಪಾಟೀಲ

ರೂ.93.33 ಕೋಟಿ ವೆಚ್ಚದ ನಗರದ ಕುಡಿಯುವ ನೀರಿನ ಕಾಮಗಾರಿಗೆ ಅನುಮೋದನೆ : ಎಂ.ಬಿ.ಪಾಟೀಲ

ವಿಜಯಪುರ, ಸೆ.2: ವಿಜಯಪುರ ನಗರದ ಕುಡಿಯುವ ನೀರಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯದ ಡೆಡ್ ಸ್ಟೊರೇಜನಿಂದ ಕೋಲ್ಹಾರದ ಹತ್ತಿರ ಹಾಲಿ ಕುಡಿಯುವ ನೀರಿನ ಟ್ರೀಟ್‍ಮೆಂಟ್ ಪ್ಲಾಂಟಿಗೆ ನೀರೆತ್ತಿ ತುಂಬಿಸುವ ರೂ 93.33ಕೋಟಿ ಮೊತ್ತದ ಯೋಜನೆಗೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕೃಷ್ಣಾ ಭಾಗ್ಯ ಜಲ ನಿಗಮದ 112ನೇ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಾ:ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಕೋಲ್ಹಾರದ ಬ್ಯಾರೇಜ್‍ನಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಕುಡಿಯುವ ನೀರಿನ ಕೊರತೆ ಆಗದಂತೆ ತಪ್ಪಿಸಲು ಶಾಶ್ವತ ಪರಿಹಾರ ನೀಡಲು ಈ ಯೋಜನೆಯನ್ನು ರೂಪಿಸಿದ್ದು ಇಂದು ನಡೆದ ಸಭೆಯಲ್ಲಿ ಈ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಳೆಯ ಕೋರ್ತಿ ಕೋಲ್ಹಾರ ಸೇತುವೆ ಎತ್ತರ.. ಕೋಲ್ಹಾರದ ಹತ್ತಿರ ಕೃಷ್ಣಾ ನದಿಗೆ ಈ ಹಿಂದೆ ನಿರ್ಮಿಸಿರುವ ಹಾಗೂ ಸಧ್ಯ ಆಲಮಟ್ಟಿ ಆಣೆಕಟ್ಟೆಯ ಹಿನ್ನೀರಿನಲ್ಲಿ ಮುಳಗಡೆಯಾಗುತ್ತಿರುವ ಹಳೆಯ ಕೊರ್ತಿ-ಕೋಲ್ಹಾರ ಬ್ರಿಜ್ ಕಂ ಬ್ಯಾರೆಜ್‍ನ ಎತ್ತರವನ್ನು 1.80ಮೀ ವರಗೆ ಹೆಚ್ಚಿಸಿ ಹಾಲಿ ಬ್ಯಾರೇಜ್‍ನ ಕಲ್ಲಿನ ಕಟ್ಟಡವನ್ನು ಕಾಂಕ್ರಿಟ್ ಹೊದಿಕೆಯಿಂದ ಬಲಪಡಿಸಿ, ನೀರಿನ ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸುವ ರೂ. 31ಕೋಟಿ ವೆಚ್ಚದ ಯೋಜನೆಗೆ ಸಹ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 
ಇದರಿಂದ ಬೇಸಿಗೆಯಲ್ಲಿ ಬಸವನ ಬಾಗೇವಾಡಿ, ವಿಜಯಪುರ ಹಾಗೂ ಬೀಳಗಿ ತಾಲೂಕಿನ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಅನಕೂಲ ಕಲ್ಪಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.