ಜಿಲ್ಲೆಯ 9 ಮಂಡಳಗಳಲ್ಲಿ ಮೇ.24ರಿಂದ ಕಬ್ಬಡ್ಡಿ ಉತ್ಸವ

ಜಿಲ್ಲೆಯ 9 ಮಂಡಳಗಳಲ್ಲಿ ಮೇ.24ರಿಂದ ಕಬ್ಬಡ್ಡಿ ಉತ್ಸವ

ವಿಜಯಪುರ,ಮೇ.23: ಪಂ.ದೀನದಯಾಳ ಉಪಾಧ್ಯಾಯರ ಜನ್ಮಶತಾಬ್ದಿಯನ್ನು ಅಂಗವಾಗಿ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ವಿಶಿಷ್ಠ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದು, ವಿಜಯಪುರ ಜಿಲ್ಲೆಯ 9 ಮಂಡಳಗಳಲ್ಲಿ ಮೇ.24 ರಿಂದ ಕಬಡ್ಡಿ ಉತ್ಸವ ಆಯೋಜಿಸಲಾಗಿದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ರವಿ ಖಾನಾಪುರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂಧ ಈ ಉತ್ಸವ ಆಯೋಜಿಸಲಾಗಿದ್ದು, ಹೊನಲು-ಬೆಳಕಿನ ಪಂದ್ಯಾವಳಿಗಳು ನಡೆಯಲಿವೆ. ಜಿಲ್ಲೆಯ 9 ಮಂಡಳಗಳಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ, ಅಲ್ಲಿ ಆಯ್ಕೆಯಾದ ತಂಡಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಲ್ಳಲಿವೆ. ಜೂನ್ ಮೊದಲ ವಾರದಲ್ಲಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪಂದ್ಯಾವಳಿಯನ್ನು ಆಯೋಜಿಸಲಾಗುವುದು. ಮಂಡಳ ವಿಭಾಗದಲ್ಲಿ ಆಯೋಜಿಸಲಾಗುವ ಕಬಡ್ಡಿ ಪಂದ್ಯದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ವಿವರಿಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಯೋಜನೆ, ಸಾಧನೆಗಳನ್ನು ಮೆಚ್ಚಿಕೊಂಡಿರುವ ಯುವಜನತೆ ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ಪಕ್ಷದತ್ತ ಮತ್ತಷ್ಟು ಸೆಳೆಯಲು ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. 
ಬಿಜೆಪಿ ಹಿರಿಯ ನಾಯಕರು ಹಾಗೂ ಯುವ ಮೋರ್ಚಾ ತಂಡಗಳ ನಡುವಣ ವಿಶೇಷ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಈಗಾಗಲೇ ಪಂದ್ಯಾವಳಿ ಆಯೋಜನೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಒನ್ ಭೂತ್ - ಟು ಯೂಥ್ 
ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹಲವಾರು ಕಾರ್ಯಚಟುವಟಿಕೆಗಳನ್ನು ಹಾಕಿಕೊಳ್ಳಲಾಗಿದೆ. ಇದರ ಅಡಿಯಲ್ಲಿ ಪ್ರತಿಯೊಂದು ಭೂತ್‍ಗೆ ಇಬ್ಬರು ಉತ್ಸಾಹಿ ಯುವ ನಾಯಕರನ್ನು ಪ್ರಮುಖ ಹಾಗೂ ಸಹ ಪ್ರಮುಖರನ್ನಾಗಿ
 ನೇಮಕ ಮಾಡಲಾಗುವುದು. ಎಲ್ಲ ಭೂತ್‍ಗಳಲ್ಲಿಯೂ ಈ ತೆರನಾದ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವುದು, ಮಾಜಿ ಮುಖ್ಯಮಂತ್ರಿ ಬಿ.ಎಸ್. 
ಯಡಿಯೂರಪ್ಪ ಅವರ ಆಶಯದಂತೆ 150 ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ದೃಷ್ಟಿಯಿಂದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಖಾನಾಪುರ ವಿವರಿಸಿದರು.
ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಶರತ್ ಬಿರಾದಾರ, ಮಂಚಾಲೇಶ್ವರಿ ನಾಯಕ, ಕೃಷ್ಣಾ ಗುನ್ನಾಳಕರ, ಬಾಳಪ್ಪ ಗೂಗಿಹಾಳ, ಶ್ರೀಕಾಂತ ರಾಠೋಡ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
-