ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಸೇರಿಸುವಂತೆ ಆಗ್ರಹ 

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಸೇರಿಸುವಂತೆ ಆಗ್ರಹ 

    ವಿಜಯಪುರ,ಅ.14: : ಕರ್ನಾಟಕ ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಸೇರಿಸುವ ಕುರಿತು ಹಾಲುಮತ ಮಹಾಸಭಾ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕರೆಪ್ಪ ಬಸ್ತಾಳ ಮಾತನಾಡಿ, ಬುಡಕಟ್ಟು ಮೂಲದ ಕುರುಬರನ್ನು ಪಂಗಡಗಳ ಆಧಾರದ ಮೇಲೆ ವಿಭಾಗಿಸಿ ಹಂಚಲ್ಪಟ್ಟ ಮೀಸಲಾತಿ ಎಲ್ಲ ಪಂಗಡದ ಕುರುಬರಿಗೂ ನ್ಯಾಯ ಸಮ್ಮತವಾಗಿ ದಕ್ಕಬೇಕು ಹಲವು ದಿನಗಳಿಂದ ಪ್ರತಿಧ್ವನಿಸುತ್ತ ಬಂದಿದೆ. ಈ ಬಗ್ಗೆ ಅನೇಕ ರೀತಿಯ ಹೋರಾಟ ಹರತಾಳಗಳಿಗೂ ವೇದಿಕೆ ಸಿದ್ದವಾಗುತ್ತಿದೆ. ಇತ್ತೀಚಿಗೆ ರಾಜಸ್ಥಾನದಲ್ಲಿ ಗುಜ್ಜರ ಸಮುದಾಯದವರು, ಗುಜರಾತನಲ್ಲಿ ಪಟೇಲ್ ಸಮುದಾಯದವರು, ಹರಿಯಾಣದಲ್ಲಿ ಜಾಟ್ ಸಮುದಾಯದವರು, ಮೀಸಲು ಹಕ್ಕಿಗಾಗಿ ಹೋರಾಟ ನಡೆಸಿದ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕುರುಬರು ಮೀಸಲಾತಿಗಾಗಿ ತೀವ್ರ ಹೋರಾಟಕ್ಕೆ ಸನ್ನದ್ದರಾಗಿದ್ದಾರೆ. ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿಸಬೇಕೆಂಬ ಆಗ್ರಹ ಹಲವು ದಶಕದಿಂದಲೂ ಕೇಳಿ ಬರುತ್ತಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲವಾದ್ದರಿಂದ ಕುರುಬರ ಮೀಸಲು ದಶಕಗಳ ಕೂಗು ಕೇಳಿ ಬರಬೇಕಾಗಿದೆ ಎಂದರು.
    ರಾಜ್ಯ ಉಪಾಧ್ಯಕ್ಷರಾದ ಹೆಚ್.ಎಸ್. ಜ್ಯೋತಪ್ಪಗೋಳ ಮಾತನಾಡಿ, ಕರ್ನಾಟಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮಾವೇಶವನ್ನು ನಡೆಸಲಾಗಿದೆ ಆದರೂ ಕುರುಬರ ಎಸ.ಟಿ. ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮ್ಮ ಹಕ್ಕುಗಳನ್ನು ನಾವು ಪಡೆಯಲು ಹೋರಾಟ ತೀವ್ರಗೊಳಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಏಕಕಾಲಕ್ಕೆ ಮುಖ್ಯಮಂತ್ರಿಗಳಿಗೆ ತಮಗೆ ಕುರುಬರನ್ನು ಎಸ್.ಟಿ.ಗೆ ಸೇರಿಸಿ ಮನವಿಯನ್ನು ಸಲ್ಲಿಸಲಾಗುತ್ತಿದೆ ಎಂದರು.
     ರಾಜ್ಯ ಸಂಚಾಲಕರಾದ ರಾಜು ಕುರಿಯವರ ಮಾತನಾಡಿ, ನಮ್ಮ ಬಗ್ಗೆ ನಿರ್ಲಕ್ಷ್ಯ ಧೋರಣೆಗಳನ್ನು ಅನುಸರಿಸಿದರೆ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಕುರುಬರು ನಾಲ್ಕು ದಿಕ್ಕುಗಳಿಂದ ಅನಿರ್ದಿಷ್ಟಾವಧಿ ಚಳುವಳಿಯನ್ನು ಮಾಡುವ ನಿರ್ಧಾರವನ್ನು ಮಾಡಬೇಕಾಗಿದೆ. ಕೂಡಲೇ ದಶಕಗಳ ಬೇಡಿಕೆಯಾದ ಕುರುಬರನ್ನು ಎಸ್.ಟಿ.ಗೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
    ಈ ಸಂದರ್ಭದಲ್ಲಿ ಮುದಕಣ್ಣ ಹೋರ್ತಿ, ಸಂಗಣ್ಣ ಆರ್. ವಂದಾಲ, ಯಲ್ಲಪ್ಪ ವಗ್ಗರ, ನಿಂಗೂ ಬೆನಕಪ್ಪಗೋಳ, ಗುರಸಿದ್ದಪ್ಪಗೌಡ ಬಿರಾದಾರ, ಸೋಮು ಸೋಲಾಪುರ, ರಮೇಶ ಗೋಡೇಕಾರ, ಚಿನ್ನು ಚಿನ್ನಗುಂಡಿ, ಬೌರಮ್ಮ ಹಳೇಮನಿ, ಭಾರತಿ ಸುರಪೂರ, ರಮೇಶ ಕಮದಾಳ, ಎಂ.ಆರ್. ಭಾವಿಕಟ್ಟಿ, ಬಸವರಾಜ ಬಿರಾದಾರ, ಬಾಬು ಹಂಚಿನಾಳ, ಮುದಕಣ್ಣ ಗುಂಡಳ್ಳಿ ಇನ್ನಿತರು ಉಪಸ್ಥಿತರಿದ್ದರು.