ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಜನಾಂಗದ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ದೊರಕಿಸಲು ಸೂಚನೆ

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಜನಾಂಗದ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ದೊರಕಿಸಲು ಸೂಚನೆ


ವಿಜಯಪುರ,ಜೂ.13: ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಅನುಕೂಲಕ್ಕಾಗಿ ಇರುವ ಯೋಜನೆಗಳಡಿಯ ಅನುದಾನ ಸಮರ್ಪಕವಾಗಿ ಬಳಸುವ ಜೊತೆಗೆ ನಿಯಮಾವಳಿಯನ್ವಯ ನೇಮಕಾತಿ ಸೇರಿದಂತೆ ಇತರೆ ಸೌಲಭ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಆಯೋಗದ ಸದಸ್ಯರಾದ ಆನಂದ ಸಂದ್ರಿಮನಿ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಅನುಕೂಲಕ್ಕಾಗಿ ಮೀಸಲಿಟ್ಟ ಅನುದಾನ ಈಜನಾಂಗದ ಅನುಕೂಲಕ್ಕೆ ಬಳಸುವ ಜೊತೆಗೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಮೀಸಲಾತಿಯನ್ವಯ ನೇಮಕಾತಿ, ನಿಯಮಾವಳಿಯನ್ವಯ ಅನುದಾನ ಬಳಕೆ, ಸೇರಿದಂತೆ ಈ ಜನಾಂಗಕ್ಕೆ ಸಿಗಬಹುದಾದ ಎಲ್ಲ ಸವಲತ್ತುಗಳನ್ನು ಸಕಾಲಕ್ಕೆ ತಲುಪಿಸುವಂತೆ ಸೂಚಿಸಿದರು. 

ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನಾಂಗಕ್ಕೆ ಇರುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಕಳೆದ ಸಾಲಿನಲ್ಲಿ ಈ ಜನಾಂಗದ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ವಿತರಿಸಲಾದ ಸಲಕರಣೆ, ಪರಿಕರ ಸೇರಿದಂತೆ ಇತರೆ ಸೌಲಭ್ಯ ಒದಗಿಸಿರುವ ಬಗ್ಗೆ ಸೂಕ್ತ ತನಿಖೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಕೈಗೊಂಡು ಪರಿಶೀಲನಾ ವರದಿ ಸಲ್ಲಿಸುವಂತೆ ಸೂಚಿಸಿದರು. 

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನಾಂಗಕ್ಕೆ ದೊರೆಯಬಹುದಾದ ವಿವಿಧ ಸಾಲ-ಸೌಲಭ್ಯಗಳನ್ನು ಸಹ ಸಕಾಲಕ್ಕೆ ದೊರಕಿಸುವಂತೆ ಅಂಬೇಡ್ಕರ್ ಅಭಿವೃದ್ದಿ ನಿಗಮ,  ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ವಿವಿಧ ಬ್ಯಾಂಕ್ಗ್ಳ ಮೂಲಕ ಸಾಲ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾದ ಕೊಳವೆ ಬಾವಿಗಳ ಬಗ್ಗೆ ಆಯಾ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು. ದೌರ್ಜನ್ಯ ಪ್ರಕರಣದಲ್ಲಿ ನೊಂದ ಸಂತ್ರಸ್ಥರಿಗೆ ಸಕಾಲಕ್ಕೆ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು. ಈ ಜನಾಂಗದ ಮೇಲೆ ಯಾವುದೇ ರೀತಿಯ ತಪ್ಪು ಪ್ರಕರಣಗಳು ಕೂಡ ದಾಖಲಾಗದಂತೆ ಎಚ್ಚರ ವಹಿಸಲು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು, ಪಾರದರ್ಶಕ ತನಿಖೆಯ ಜೊತೆಗೆ ಕಾನೂನಿನ ರಿತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಅದರಂತೆ ವಿವಿಧ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಸಂಸ್ಥೆಗಳಿಗೆ ನೀಡುವ ಅನುಮತಿ, ವಿದ್ಯಾರ್ಥಿಗಳ ಪ್ರವೇಶಾವಕಾಶ, ನೇಮಕಾತಿ ಹಾಗೂ ಅನುದಾನ ಬಳಕೆಯಲ್ಲಿ ಸರ್ಕಾರದ ನಿಯಮ ಪಾಲಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗಕ್ಕೆ ಸರಿಯಾಗಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಸೂಕ್ತ ಗಮನ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ವಿವಿಧ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ಥರಿಗೆ ನಿಯಮಾವಳಿಯಂತೆ ಪರಿಹಾರ ವಿತರಿಸಲಾಗುತ್ತಿದ್ದು, ಸರ್ಕಾರದಿಂದ ಹೆಚ್ಚುವರಿಯಾಗಿ  33 ಲಕ್ಷ ರೂ.ಗಳ ಪರಿಹಾರ ಧನವನ್ನು ಬಿಡುಗಡೆ ಮಾಡಲು ಈಗಾಗಲೇ ಕೋರಲಾಗಿದ್ದು, ಅನುದಾನ ಬಿಡುಗಡೆಯಾದ ನಂತರ  ಬಾಕಿ ಪ್ರಕರಣದ ಫಲಾನುಭವಿಗಳಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಸಭೆಯಲ್ಲಿ  ಉಪಸ್ಥಿತರಿದ್ದ  ಎಸ್ಸಿ-ಎಸ್ಟಿ ದೌರ್ಜನ್ಯ ಸಲಹಾ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್ ಹಾಗೂ ಅಭಿಷೇಕ ಚಕ್ರವರ್ತಿ, ನಾಗರಾಜ ಲಂಬು,  ಜಿತೇಂದ್ರ ಕಾಂಬಳೆ ಮಾತನಾಡಿ,, ದೇವದಾಸಿಯರಿಗೆ, ಅವರ ಮಕ್ಕಳಿಗೆ ಸೂಕ್ತ ಪುನರವಸತಿ ಕಲ್ಪಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರಿಗೆ ಮೀಸಲಾತಿಯನ್ವಯ ನೇಮಕಾತಿ ಆಯಾ ಇಲಾಖೆಯಲ್ಲಿ ಕಲ್ಪಿಸಬೇಕೆಂದು ಹೇಳಿ, ಕೆಲವು ಶಿಕ್ಷಕರ ಸಮಸ್ಯೆಗಳು, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವ್ಯಾಪ್ತಿಯಲ್ಲಿ ಈ ಜನಾಂಗಕ್ಕೆ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. 

ಸಭೆಯಲ್ಲಿ ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮಗಳು, ಕೈಗಾರಿಕೆ ಇಲಾಖೆ, ಸಾರ್ವಜನಿಕ ಶಿಕ್ಷಣ, ಇಲಾಖೆ, ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ದಿಕೋಶ, ಮಹಾನಗರ ಪಾಲಿಕೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಎಸ್ಸಿ-ಎಸ್ಟಿ ಜನಾಂಗದ ಅನಕೂಲಕ್ಕೆ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಮಹಾನಗರ ಪಾಲಿಕೆ ಆಯುಕ್ತ ಶ್ರೀ ಹರ್ಷಶೆಟ್ಟಿ, ಡಿಎಸ್ಪಿದ ಶ್ರೀರಾಮ ಅರಸಿದ್ದಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.