ಮುಸ್ಲಿಂ ಬಾಂಧವರಿಂದ ಟಿಪ್ಪು ಸುಲ್ತಾನ್ ಜಯಂತಿ ಬಹಿಷ್ಕಾರ 

ಮುಸ್ಲಿಂ ಬಾಂಧವರಿಂದ ಟಿಪ್ಪು ಸುಲ್ತಾನ್ ಜಯಂತಿ ಬಹಿಷ್ಕಾರ 


ಬಾಗಲಕೋಟ, ನ. 9: ನಾಳೆ ಸರಕಾರದ ವತಿಯಿಂದ ಹುನಗುಂದ ತಾಲೂಕಿನಲ್ಲಿ ಆಚರಿಸಲಾಗುವ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ತಾಲೂಕಿನ ಮುಸ್ಲಿಂ ಬಾಂಧವರು ಬಹಿಷ್ಕರಿಸಬೇಕು.
ಹುನಗುಂದ ತಾಲೂಕಿನ ಮುಸ್ಲಿಂ ಸಮಾಜದ ಪ್ರಮುಖರು, ಯುವಕರ ಮೇಲೆ ಶಾಸಕರ ಕುಮ್ಮಕ್ಕಿನಿಂದ ಪೊಲೀಸರು ಅನಾವಶ್ಯಕವಾಗಿ ಗುರುತರ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇಂಥ ಸಂದರ್ಭದಲ್ಲಿ ಹುನಗುಂದ ತಾಲೂಕಿನ ಮುಸ್ಲಿಂ ಬಾಂಧವರ ಮನಸ್ಸುಗಳಿಗೆ ಅತೀವ ನೋವಾಗಿದೆ. 
ಹುನಗುಂದ ತಾಲೂಕಿನಲ್ಲಿ ಈಗ ಶಾಸಕರ ನಿರಂಕುಶ ಅಧಿಕಾರ ಮಿತಿ ಮೀರಿದೆ, ಅಧಿಕಾರ ದುರುಪಯೋಗ ನಿರಂತರವಾಗಿ ನಡೆದಿದೆ. ಅಧಿಕಾರಿಗಳು ಶಾಸಕರ ಆಣತಿಯನ್ನು ಪಾಲಿಸಲೇಬೇಕಾಗಿದೆ. ಪಾರದರ್ಶಕತೆ, ಜನಪರತೆಯ ಬಗ್ಗೆ ಮಾತನಾಡುವುದೇ ದೊಡ್ಡ ಅಪರಾಧವಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. 
ಟಿಪ್ಪು ಜಯಂತಿ ಆಚರಣೆ ಸರಕಾರದ ನಿರ್ಧಾರ. ಕಳೆದ ಮೂರ್ನಾಲ್ಕು ವರ್ಷದಿಂದಲೂ ಆಚರಣೆ ನಡೆದಾಗ ಯಾವುದೇ ಸಮಸ್ಯೆಗಳೂ ಇರಲಿಲ್ಲ. ಮೂರ್ನಾಲ್ಕು ವರ್ಷಗಳಲ್ಲಿ ಇಲ್ಲದಿದ್ದ ಶಾಂತಿ ಸುವ್ಯವಸ್ಥೆಯ ಸಮಸ್ಯೆ ಇದೇ ವರ್ಷ ಯಾಕೆ ಉದ್ಭವಿಸಿತು ಎಂಬ ಪ್ರಶ್ನೆ ಜಿಲ್ಲೆಯ ಪ್ರಜ್ಞಾವಂತ ಜಾತ್ಯಾತೀತ ಮನೋಭಾವನೆ ನಾಗರೀಕರನ್ನು ಕಾಡುತ್ತಿದೆ.  ಸರಕಾರವೇ ಮಾಡಬೇಕಾದ ಕಾರ್ಯಕ್ರಮವನ್ನು ಸ್ಥಳೀಯವಾಗಿ ಕೆಲವು ಸಂಘಟನೆಗಳು ಮಾಡುವುದಲ್ಲಿ ತಪ್ಪೇನಿದೆ?
ಜಿಲ್ಲಾಧಿಕಾರಿಗಳು ಶಾಸಕರ ಅಣತಿಯಂತೆ ಟಿಪ್ಪು ಜಯಂತಿಯ ಖಾಸಗಿ ಕಾರ್ಯಕ್ರಮಗಳನ್ನು ನಿಷೇಧಿಸುವ ಆದೇಶ ಹೊರಡಿಸಿದರು. ಈ ಆದೇಶವನ್ನು ಉಲ್ಲಂಘಿಸುವ ದುರುದ್ದೇಶ ಯಾರದೂ ಇರಲಿಲ್ಲ. ಪೂರ ನಿರ್ಧರಿತವಾಗಿ ದಿನಾಂಕ 3ರಂದು ಉಸ್ಮಾನ್ ಗಣಿ ಹುಮನಾಬಾದ್ ಅವರ ನೇತೃತ್ವದಲ್ಲಿ ಇಳಕಲ್‍ನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಸದರಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ ಕಾರಣ ಸದರಿ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಕಾರ್ಯಕ್ರಮಕ್ಕೆ ಸೇರಿದ ಯುವಕರಿಗೆ ಕಾರ್ಯಕ್ರಮ ಮುಂದೂಡಿದ ಬಗ್ಗೆ ತಿಳಿಹೇಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಪೊಲೀಸ್ ಅಧಿಕಾರಿಗಳು ನಮ್ಮ ಸಮುದಾಯದ ಮುಖಂಡರ ಹಾಗೂ ದಲಿತ ಸಮುದಾಯದ ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಿ ಅನಗತ್ಯವಾಗಿ ಪ್ರಕರಣ ದಾಖಲಿಸಿಕೊಂಡು ಹುನಗುಂದ ತಾಲೂಕಿನಾದ್ಯಂತ ಭಯಭೀತಿಯ ವಾತಾವರಣ ಸೃಷ್ಟಿ ಮಾಡಿದರು.  
ಇದರಲ್ಲಿ ಶಾಸಕರು ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಕೆಲವು ಪ್ರಮುಖರ ಏಳ್ಗೆಯನ್ನು ಸಹಿಸದ ಶಾಸಕರು ಅವರ ದಮನವೇ ತಮ್ಮ ಗುರಿ ಎಂಬಂತೆ ವರ್ತಿಸುತ್ತಾ ಅದಕ್ಕಾಗಿ ಪೊಲೀಸರನ್ನಷ್ಟೇ ಅಲ್ಲ, ಜಿಲ್ಲೆಯ  ಆಡಳಿತ  ಯಂತ್ರವನ್ನು ದುಪಯೋಗ ಮಾಡಿಕೊಂಡಿದ್ದಾರೆ. ಯಾವುದೇ ತಪ್ಪು ಮಾಡದ ಮುಸ್ಲಿಂ ಪ್ರಮುಖರು, ಯುವಕರು ಜೈಲು ವಾಸ ಅನುಭವಿಸುತ್ತಿರುವಾಗ ಹುನಗುಂದ ತಾಲೂಕಿನ ಮುಸ್ಲಿಂ ಬಾಂಧವರು ಸರಕಾರದ ಟಿಪ್ಪು ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳುವುದು ಯಾವ ಪುರುಷಾರ್ಥಕ್ಕಾಗಿ?
ಮುಸ್ಲಿಂ ಸಮುದಾಯವನ್ನು ಒಡೆದು ಆಳಲು ಯತ್ನಿಸುತ್ತಿರುವ ಶಾಸಕರ ಧೋರಣೆಯನ್ನು ಮುಸ್ಲಿಂ ಬಾಂಧವರೆಲ್ಲರೂ ಒಕ್ಕೊರಲಿನಿಂದ ಧಿಕ್ಕರಿಸಲೇಬೇಕು. ಇದು ಸಮಾಜದ ಸ್ವಾಭಿಮಾಮನದ ಪ್ರಶ್ನೆ. ಅದಕ್ಕಾಗಿ ಹುನಗುಂದ ತಾಲೂಕಿನಲ್ಲಿ ತಾಲೂಕು ಆಡಳಿತದಿಂದ ಇದೇ ಶುಕ್ರವಾರ ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ತಾಲೂಕಿನಲ್ಲಿನ ಮುಸ್ಲಿಂ ಬಾಂಧವರೆಲ್ಲರೂ ಒಗ್ಗಟ್ಟಿನಿಂದ ಬಹಿಷ್ಕರಿಸಬೇಕು ಹಾಗೂ ಮುಂದೊಂದು ದಿವಸ ಸರ್ಕಾರದ ಪರವಾನಿಗೆಯೊಂದಿಗೆ ಟಿಪ್ಪು ಜಯಂತಿಯನ್ನು ಅರ್ಥಪೂರ್ಣವಾಗಿ ಖಾಸಗಿಯಾಗಿ ಆಚರಿಸಲು ಸಮುದಾಯದ ಪ್ರಮುಖರು ತೀರ್ಮಾನಿಸಿದ್ದಾರೆ. 
ಕಾರಣ ನಾಳೆ ದಿ. 10 ರಂದು ತಾಲೂಕ ಆಡಳಿತ ಕೈಗೊಳ್ಳುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಯಾರೂ ಭಾಗವಹಿಸದಿರಲು ಸಮಾಜದ ಪ್ರಮುಖರಾದ ರಜಾಕ್ ತಟಗಾರ, ಸಲೀಮ್ ಮೋಮಿನ,   ತಾಜುದ್ದೀನ್ ಹುಮ್ನಾಬಾದ, ರಮಜಾನ್ ನದಾಫ್, ಅಬ್ದುಲ್ ಕಂದಗಲ್, ಮೆಹಬೂಬ ಸರಕಾವಸ,  ಸಲೀಮ್ ಜರ್ದಾರಿ    ಗುಡುಸಾಹೇಬ ವೆಂಕಟಾಪುರ, ನೇಮತುಲ್ಲಾ ಚಟ್ನಿಹಾಳ, ಅಮೀನ ಬಾಗವಾನ, ನಿಯಾಜ್ ಅಹ್ಮದ ಪಾನವಾಲೆ,     ಬಾಬುಸಾಹೇಬ ಶಿವನಗುತ್ತಿ, ಮೈನುದ್ದೀನ ಮುದ್ದೇಬಿಹಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.