ಸ್ವಯಂಸೇವಾ ಸಂಸ್ಥೆ ಅರ್ಜಿ ವಜಾಗೊಳಿಸಿದ ಸುಪ್ರೀಂ

ಸ್ವಯಂಸೇವಾ ಸಂಸ್ಥೆ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಹರಾ- ಬಿರ್ಲಾ ಕಂಪೆನಿಗಳಿಂದ ಲಂಚ ಪಡೆದಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆಗೆ ಆದೇಶಿಸಬೇಕೆಂದು ಕೋರಿ ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ಬುಧವಾರ ತಿರಸ್ಕರಿಸಿದೆ.  ನರೇಂದ್ರ ಮೋದಿ ಅವರು ಸಹರಾ ಮತ್ತು ಬಿರ್ಲಾ ಕಂಪೆನಿಗಳಿಂದ ಲಂಚ ಪಡೆದಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆರೋಪಿಸಿದ್ದರು. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಹರಾ ಕಂಪೆನಿಯಿಂದ ₹40 ಕೋಟಿ ಲಂಚ ಪಡೆದಿದ್ದಾರೆ, ಸಹರಾ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದು ರಾಹುಲ್‌ ಹೇಳಿದ್ದರು. ಈ ದಾಖಲೆಗಳನ್ನು ರಾಹುಲ್‌ ಮೆಹ್ಸನಾದಲ್ಲಿ ಕಳೆದ ತಿಂಗಳು ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಬಹಿರಂಗಗೊಳಿಸಿದ್ದರು.  ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ಈ ದಾಖಲೆಗಳ ಆಧಾರ ಮೇಲೆ ಸ್ವಯಂಸೇವಾ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.   ‘ಪ್ರಧಾನಮಂತ್ರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಸಿರುವ ದಾಖಲೆಗಳು ವಿಶ್ವಾಸಾರ್ಹವಾಗಿಲ್ಲ. ಈ ದಾಖಲೆಗಳ ಆಧಾರದಲ್ಲಿ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ನ್ಯಾಯಾಲಯ ಒಪ್ಪುವಂಥ ಸೂಕ್ತ ದಾಖಲೆಗಳಿದ್ದರೆ ಹಾಜರುಪಡಿಸಿ’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರಿದ್ದ ನ್ಯಾಯಪೀಠ ಸ್ವಯಂಸೇವಾ ಸಂಸ್ಥೆ ಪರ ವಕೀಲ ಹೇಳಿದೆ.