ಡಾ.ಮಲ್ಲಿಕಾ ಘಂಟಿ ವಿರುದ್ದ ವಾರೆಂಟ್ ಜಾರಿ

ಡಾ.ಮಲ್ಲಿಕಾ ಘಂಟಿ ವಿರುದ್ದ ವಾರೆಂಟ್ ಜಾರಿ

ಭದ್ರಾವತಿ,ಅ.9: ಕುವೆಂಪು ವಿವಿ ಸಿಬ್ಬಂದಿ ವಿರುದ್ದ ದೂರು ನೀಡಿ ವಿಚಾರಣೆಗೆ ಗೈರುಹಾಜರಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಮಲ್ಲಿಕಾ ಘಂಟಿ ವಿರುದ್ಧ ಭದ್ರಾವತಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದೆ.

ಕುವೆಂಪು ವಿವಿ ಕುಲಸಚಿವರಾಗಿದ್ದಾಗ ತಮ್ಮ ಕೊಲೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿ ಮಲ್ಲಿಕಾ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಪ್ರಕರಣದ ವಿಚಾರಣೆಗೆ ಡಾ.ಮಲ್ಲಿಕಾ ಗೈರಾಗಿದ್ದರಿಂದ ನ್ಯಾಯಾಲಯ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.

ಮಲ್ಲಿಕಾ ಘಂಟಿ ಅವರು, ಸಮಾರಂಭವೊಂದರಲ್ಲಿ ಭಾಷಣ ಮಾಡುವಾಗ, ಸರಕಾರದಲ್ಲಿ ಸೂಟ್ ಕೇಸ್ ನೀಡದೆ ಯಾವ ಕೆಲಸವೂ ನಡೆಯುವುದಿಲ್ಲ. ಎಲ್ಲವೂ ಹಣದ ಮೇಲೆಯೇ ನಿಂತಿರುತ್ತೆ ಎಂದು ಸರಕಾರದ ವಿರುದ್ಧ ಆರೋಪ ಮಾಡಿದ್ದರು. ಘಂಟಿ ಹೇಳಿಕೆಗೆ ಸರಕಾರದ ಕಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿ, ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯೂ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನಿಜವಾಗಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಬಳಿಕ ಮಲ್ಲಿಕಾ ಘಂಟಿ ತಾವು ಹಾಗೆ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿ ಕೈತೊಳೆದುಕೊಂಡಿದ್ದರು.