ವಚನ ಸಾಹಿತ್ಯ ಅಪೂರ್ವ ಕಾಣಿಕೆ : ರಮೇಶ ಕೋಟ್ಯಾಳ

ವಚನ ಸಾಹಿತ್ಯ ಅಪೂರ್ವ ಕಾಣಿಕೆ : ರಮೇಶ ಕೋಟ್ಯಾಳ

ವಿಜಯಪುರ, ಅ.6 : ಬಸವಾದಿ ಶರಣರು ಸಾರಸ್ವದ ಲೋಕಕ್ಕೆ ನೀಡಿದ ಅಪೂರ್ವ ಕಾಣಿಕೆ ವಚನ ಸಾಹಿತ್ಯ. ಶರಣರು ತಮ್ಮ ಆತ್ಮಿಕ ಲೋಕದಿಂದ ಹುಡುಕಿ ತೆಗೆದ ತತ್ವಗಳೇ ವಚನಗಳು. ಅಂತಹ ವಚನಗಳಲ್ಲಿ ಸತ್ಯ, ನಿತ್ಯ, ದರ್ಶನವಿದೆ. ಲೌಕಿಕ, ಅಲೌಕಿಕಗಳನ್ನು ಕಳೆಗೊಳಿಸುವ ಕಾಂತಿಯಿಂದೆ, ಕಾಯಕ, ದಾಸೋಹ, ಸಮಾನತೆ, ಪರಿಶುದ್ಧತೆ ಇದೆ. ವಿದ್ಯಾರ್ಥಿ, ವಿದ್ಯಾರ್ಥಿನಯರು ಶರಣರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಂಸ್ಕಾರ, ಶ್ರೇಷ್ಠ ಜ್ಞಾನವನ್ನು ಸಂಪಾದಿಸಬೇಕು. ಅದರಿಂದ ದೇಶದ ಪ್ರಗತಿ ಸಾಧ್ಯ ಎಂದು ಸಾಹಿತಿ ರಮೇಶ ಕೋಟ್ಯಾಳ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಲೋಯಲಾ ಪದವಿ ಪೂರ್ವ ಮಹಾವಿದ್ಯಾಲಯ ವಿಜಯಪುರ ಇವುಗಳ ಸಹಯೋಗದಲ್ಲಿ ವಿದ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ ಲಿಂ. ಬಾಳಾಬಾಯಿ ಗುರುಪಾದಪ್ಪ ಮೇಡಿಗಾರ, ಲಿಂ. ಈರಪ್ಪ ಚನ್ನಪ್ಪ ಬಿಜ್ಜರಗಿ ಅವರ ಸ್ವರಣಾರ್ಥ ಏರ್ಪಡಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಯಕ ದಾಸೋಹ ಕುರಿತು ಉಪನ್ಯಾಸ ನೀಡಿದರು.

ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಗೆ ಆಧ್ಯಾತ್ಮಿಕ ಚಿಂತನೆ, ಜ್ಞಾನದ ಬೆಳಕು ಮೂಡಿಸಲು ಶಿಕ್ಷಕರು, ಪಾಲಕರು ಒಂದಗೂಡಿ ಪ್ರಯತ್ನಿಸಿದರೆ ಸತ್ಯದ ಸಾಕ್ಷಾತ್ಕಾರವಾಗಿ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮಕ್ಕಳಲ್ಲಿ ಶರಣ ಸಂಸ್ಕøತಿ ಕುರಿತು ಸಾಹಿತಿ ಆರ್.ಜಿ. ಮೆಡೆಗಾರ ಉಪನ್ಯಾಸ ನೀಡಿದರು.

ಕಕಮರಿಯ ಪೂಜ್ಯ ಶ್ರೀ ತಾರಾಚಂದ ಮಹಾರಾಜರು ದಿವ್ಯ ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ಪ್ರಾಚಾರ್ಯ ಫಾದರ್ ಸ್ಟೀಫನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಗು. ಯಾದವಾಡ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಸಂಗಮೇಶ ಬದಾಮಿ ಸ್ವಾಗತಿಸಿದರು. ಆಕಾಶವಾಣಿ ನಿಲಯ ಸಹನಿರ್ದೇಶಕ ಬಸವರಾಜ ಒಂಟಗುಡಿ, ಉಪಪ್ರಾಚಾರ್ಯ ನೀತಾ ಉಪಸ್ಥಿತರಿದ್ದರು.

ಉಪನ್ಯಾಸಕಿ ಶ್ರೀದೇವಿ ಮೆಡಿಗಾರ ಕಾರ್ಯಕ್ರಮ ನಿರೂಪಿಸಿದರು. ನೀತಾ ವಂದಿಸಿದರು. ನಂತರ ವಿದ್ಯಾರ್ಥಿನಿಯರು ವಚನ ನೃತ್ಯ ಸಾದರ ಪಡಿಸಿದರು.