ಗದ್ದನಕೇರಿ ಕ್ರಾಸ್ ಅಭಿವೃದ್ಧಿ ಕಾಣದ ಬಡಾವಣೆಗಳು : ಗ್ರಾ.ಪಂ.ಸದಸ್ಯನ ಅಕ್ರಮ

ಗದ್ದನಕೇರಿ ಕ್ರಾಸ್ ಅಭಿವೃದ್ಧಿ ಕಾಣದ ಬಡಾವಣೆಗಳು : ಗ್ರಾ.ಪಂ.ಸದಸ್ಯನ ಅಕ್ರಮ

ಬಾಗಲಕೋಟ, ಸೆ.1- ತಾಲೂಕಿನ ಯಡಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ  ಆನದಿನ್ನಿ ಕ್ರಾಸ್ ರೂಢಿಯಲ್ಲಿ ಇದು ಗದ್ದನಕೇರಿ ಕ್ರಾಸ್ ಆಗಿದ್ದು  ಹುಬ್ಬಳ್ಳಿ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಳಗಾವಿ-ರಾಯಚೂರ ರಾಜ್ಯ ಹೆದ್ದಾರಿ ಸಂಗಮವಾಗಿದ್ದು ಪ್ರತಿ ನಿತ್ಯ ವಿವಿಧ ನಗರಗಳಿಗೆ ತೆರಳುವ ಪ್ರಮುಖ ಸ್ಥಳವಾಗಿದ್ದು, ಸಾವಿರಾರು ಪ್ರಯಾಣಿಕರು ನಿತ್ಯ ಸಂಚರಿಸುತ್ತಾರೆ. ಅದಲ್ಲದೇ ಸುತ್ತ ಮುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಳವಾಗಿದ್ದು, ಗ್ರಾಮೀಣ ಪ್ರದೇಶದ ಜನರು ತರಕಾರಿ ಹಿಡಿದು ಪ್ರತಿನಿತ್ಯದ ಗೃಹಪಯೋಗಿ ವಸ್ತುಗಳಿಗೆ ಗದ್ದನಕೇರಿ ಕ್ರಾಸ್‍ನ್ನು ಅವಲಂಬಿಸಿದ್ದಾರೆ. ಅಲ್ಲದೇ ಇಲ್ಲಿ ಅನೇಕ ಬಡಾವಣೆಗಳು ತಲೆ ಎತ್ತಿದ್ದು  ನೂರಾರು ಮನೆಗಳು ನಿರ್ಮಾಣಗೊಂಡು ಜನವಸತಿ ಪ್ರದೇಶವಾಗಿದೆ.
ಇಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಒಳಗೊಂಡಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದ್ದು, ಗದ್ದನಕೇರಿ ಕ್ರಾಸ್‍ನ ಕೇಂದ್ರ ಸ್ಥಳದಲ್ಲಿರುವ ಸಿದ್ಧಾರೂಢ ಬಡಾವಣೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿ ನೂರಾರು ಜನರು ವಾಸಿಸುತ್ತಿದ್ದು, ಸಂಚರಿಸಲು ಸುಸಜ್ಜಿತವಾದ ರಸ್ತೆ ಇಲ್ಲ.  ಇಲ್ಲಿ ನೆಪಮಾತ್ರಕ್ಕೆ ಸ್ವಲ್ಪ ಮಣ್ಣು ಕಾರ್ಯ ಕೈಗೊಂಡಂತೆ ಮಾಡಿ ಗ್ರಾ.ಪಂ.ನಿಂದ ಹಣ ಎತ್ತಲಾಗಿದೆ.
ಈ ಹಿಂದೆ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು. ಅದು ಆಕಸ್ಮಿಕ ಅಪಘಾತದಿಂದ ಹಾನಿಗೀಡಾಯಿತು. ಅಲ್ಲಿಯ ಕುಡಿಯುವ ನೀರಿನ ಘಟಕದ ಯಂತ್ರಗಳು ಮಾಯವಾಗಿದ್ದವು. ಆ ಎಲ್ಲ ಯಂತ್ರಗಳು ಗ್ರಾ.ಪಂ.ಸದಸ್ಯನ ಮನೆಯಲ್ಲಿ ಇವೆ ಎಂದು ಸ್ಥಳೀಯರು ಆಗ್ರಹ ಪಡಿಸಿದ್ದರಿಂದ ಮರಳಿ ಹಾಳಾದ ಯಂತ್ರ  ಗ್ರಾ.ಪಂ. ಸೇರಿದವು. ಈಗ ಬಡಾವಣೆಯ ರಸ್ತೆಗಳಿಗೆ ತೇಪೆ ಹಾಕುವ ಕೆಲಸ ಮಾಡಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಗ್ರಾ.ಪಂ. ಜೆ.ಸಿ.ಬಿ.ಮಾಲಿಕನಾಗಿದ್ದರಿಂದ ಮಳೆಗಾಲದಲ್ಲಿ ಕೆಲಸವಿಲ್ಲದೇ ನಿಂತಿರುವ ಜೆ.ಸಿ.ಬಿ.ಯಿಂದ ಸುಮ್ಮ ಸುಮ್ಮನೆ ರಸ್ತೆ ನಿರ್ಮಿಸಿದಂತೆ ಮಾಡಿ ಬಿಲ್ಲು ತೆಗೆದುಕೊಳ್ಳುತ್ತಾನೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೇ ಇಲ್ಲಿ ಅನೇಕ ಗೂಡಗಂಡಿಗಳು ಖಾನಾವಳಿಗಳಿಗೆ ಗ್ರಾ.ಪಂ.ವತಿಯಿಂದ ನೀರು ಪೂರೈಸಲಾಗುತ್ತಿದ್ದು, ಅವುಗಳ ದಾಖಲೆ ಇಲ್ಲ. ನೀರಿನ ಕರ ಪಾವತಿಸುತ್ತಿಲ್ಲ. ಈ ಕುರಿತು ಅನೇಕ ಬಾರಿ ಗ್ರಾಪಂ ನಲ್ಲಿ ವಿಚಾರಿಸಲಾಗಿದ್ದು ಇನ್ನುವರೆಗೂ ಕ್ರಮ ಕೈಗೊಂಡಿಲ್ಲ.

 ಮಾನ್ಯ ಶಾಸಕರೇ ಇತ್ತ ಕಡೆ ಸ್ವಲ್ಪ ನೋಡಿ
ಬೀಳಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಕ್ರಾಸ್‍ಗೆ ಶಾಸಕ ಜೆ.ಟಿ.ಪಾಟೀಲ ಪ್ರತಿನಿತ್ಯ ಹಾದು ಹೋಗುತ್ತಾರೆ. ಇಲ್ಲಿನ  ಬಡಾವಣೆಗಳಿಗೆ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೆಲ ರಸ್ತೆಗಳು ಹಾಗೂ ಅಭಿವೃದ್ಧಿ ಕೆಲಸಗಳು ಆಗಿದ್ದು, ಅವಶ್ಯವಿರುವ ಬಡಾವಣೆಗಳಲ್ಲಿ ಇನ್ನು ರಸ್ತೆಗಳಿಲ್ಲ. ಅನೇಕ ಬಾರಿ ವಿಚಾರಿಸಿದಾಗ ಎಸ್.ಸಿ.ಎಸ್.ಟಿ ಜನ ಇದ್ದಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದಾಗ ಇಲ್ಲಿ ಅನೇಕ ಎಸ್.ಸಿ.ಎಸ್.ಟಿ. ಜನಾಂಗದವರು ರಸ್ತೆ ನಿರ್ಮಿಸಿಕೊಡಬೇಕೆಂದು ಅನೇಕ ಬಾರಿ ಮೌಖಿಕವಾಗಿ ವಿನಂತಿಸಲಾಗಿದ್ದರೂ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಇನ್ನಾದರೂ ಗ್ರಾ.ಪಂ.ದವರು, ಶಾಸಕರು ಇತ್ತ ಗಮನ ಹರಿಸಿ ವಾಸಿಸುವ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.