ವೀರ ವನಿತೆ ಓಬವ್ವಳ ಸಾಧನೆ ಮೆಚ್ಚುವಂತದ್ದು: ಛಲವಾದಿ

ವೀರ ವನಿತೆ ಓಬವ್ವಳ ಸಾಧನೆ ಮೆಚ್ಚುವಂತದ್ದು: ಛಲವಾದಿ

    ಬಾಗಲಕೋಟ, ನ.13: ಚಿತ್ರದುರ್ಗದ ಕಲ್ಲಿನಕೋಟೆಯಲ್ಲಿ ಹೈದರಾಲಿಯ ಸೈನ್ಯ ಮದಕರಿನಾಯಕನ ರಾಜ್ಯಕ್ಕೆ ಮುತ್ತಿಗೆ ಹಾಕಿದಾಗ ತನ್ನ ಮನೆಯಲ್ಲಿರುವ ವನಕೆಯನ್ನು ಹಿಡಿದು ಹೈದಲಾಲಿಯ ಸೈನ್ಯವನ್ನು ನುಚ್ಚು ನೂರು ಮಾಡಿದ ವೀರ ವನಿತೆ ಒನಕೆ ಓಬವ್ವನ ಸಾಧನೆ ಮೆಚ್ಚುವಂತಹದ್ದು ಎಂದು ಚಲವಾದಿ ಸಮಾಜದ ಹಿರಿಯ ಮುಖಂಡ ಬಸವರಾಜ ಚಲವಾದಿ ಹೇಳಿದರು.
    ಅವರು ನಗರದ ಅಕ್ಷಯ ಹೋಟೆಲ್‍ನಲ್ಲಿಂದ ಛಲವಾದಿ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಒನಕೆ ಓಬವ್ವಳ ಜಯಂತ್ಯೋತ್ಸವ ಹಾಗೂ ಮಹಾಸಭೆಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
    ಮುಂದುವರೆದು ಮಾತನಾಡಿದ ಅವರು 1754ರಿಂದ 1779ರವರೆಗೆ ಚಿತ್ರದುರ್ಗದ ಮದಕರಿನಾಯಕನ ಸಂಸ್ಥಾನದಲ್ಲಿ ವೀರ ವನಿತೆ ಒನಕೆ ಓಬವ್ವಳ ಗಂಡ ಮುದ್ದು ಹನುಮ ಯುದ್ದದ ಕಹಳೆಯನ್ನು ಊದುತ್ತಿದ್ದ, ಓಬವ್ವಳ ಗಂಡ ಮುದ್ದು ಹನುಮ ಊಟಕ್ಕೆ ಕುಳಿತ ಸಮಯದಲ್ಲಿ ಗಂಡನಿಗೆ ಕುಡಿಯಲು ನೀರನ್ನು ತರಲು ತನ್ನೀರಬಾವಿಗೆ ಹೊರಟಿದ್ದ ಸಂದರ್ಭದಲ್ಲಿ ಹೈದರಾಲಿಯ ಸೈನ್ಯ ಒಂದು ಸಣ್ಣ ಕಿಂಡಿಯಿಂದ ಒಬ್ಬೊಬ್ಬರಾಗಿ ಬರುತ್ತಿರುವ ದೃಶ್ಯವನ್ನು ಕಂಡ ಒನಕೆ ಓಬವ್ವ ತನ್ನ ವೀರಗಚ್ಚೆಯನ್ನು ಹಾಕಿ  ತನ್ನ ಕೈಯಲ್ಲಿದ್ದ ಒನಕಿಯಿಂದ ಒಬ್ಬೊಬ್ಬರನ್ನಾಗಿ ಕೊಂದು ಹಾಕಿದಳು ಎಂದು ಓಬವ್ವಳ ಸಾಹಸಗಾಥೆಯನ್ನು ವಿವರಿಸಿದ ಅವರು, ಅಂತಹ ವೀರವನಿತೆ ನಮ್ಮ ಚಲವಾದಿ ಜನಾಂಗಕ್ಕೆ ಸೇರಿದ್ದು, ಹೆಮ್ಮೆಯ ವಿಷಯ ಎಂದರು. ಇಂದು ಛಲವಾದಿ ಮಹಾಸಭಾ ಇಂತಹ ವೀರವನಿತೆಯ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ ಎಂದರು.
    ವೀರ ವನಿತೆ ಒನಕೆ ಓಬವ್ವಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಶರಣಪ್ಪ ಚಲವಾದಿ ಮಾತನಾಡಿ, ಡಾ||ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದ ಯುವಕರು ಶಿಕ್ಷಣವಂತರಾಗಿ ಇತರ ಸಮುದಾಯಗಳಿಗೆ ಗೌರವ ಕೊಡುತ್ತಾ ಛಲವಾದಿ ಮಹಾಸಭೆಯನ್ನು ಸಂಘಟನೆ ಮಾಡಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರಲ್ಲದೇ, ನಮ್ಮ ಸಮುದಾಯ ಸ್ವಾಭಿಮಾನಿ ಸಮುದಾಯವಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂಚೂಣಿಯಲ್ಲಿದ್ದರೂ ಕೂಡ ಸಮಾಜ ಸಂಘಟನೆಯಲ್ಲಿ ಹಿಂದೆ ಬಿದ್ದಿರುವದು ಖೇದಕರ ಸಂಗತಿ. ಕಾರಣ ಸಮಾಜ ಬಾಂಧವರು ಗ್ರಾಮ ಮಟ್ಟದಿಂದ ಛಲವಾದಿ ಮಹಾಸಭಾವನ್ನು ಗಟ್ಟಿಗೊಳಿಸಿ ಸಮಾಜದಲ್ಲಿ ಹಿಂದುಳಿದವರನ್ನು ಮೇಲೆಕ್ಕೆತ್ತುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಡಿ.ಹುನ್ನೂರ ಮಹಾಸಭೆಯು ಬರುವ ಜನೇವರಿ ತಿಂಗಳಲ್ಲಿ ಜಿಲ್ಲಾ ಮಟ್ಟದ ಛಲವಾದಿ ಮಹಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಕಾರಣ ಪ್ರತಿ ತಾಲೂಕಿನ ಅಧ್ಯಕ್ಷರು ಆಯಾ ತಾಲೂಕುಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಸಮಾವೇಶವನ್ನು ಮಾಡಿ ಜಿಲ್ಲಾ ಸಮಾವೇಶಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು
    ನ್ಯಾಯವಾದಿ ಎಂ.ಜಿ.ಚಲವಾದಿ, ಯಮನಪ್ಪ ಚಲವಾದಿ (ಶಿರೂರ) ಮಾತನಾಡಿ ಸಮಾಜವನ್ನು ಸಂಘಟಿಸುವ ಕ್ರಮಗಳ ಬಗ್ಗೆ ವಿವರಿಸಿದರು. 
    ಸಮಾರಂಭದಲ್ಲಿ ನಾಗೇಶ ಗಚ್ಚಿನಮನಿ, ಮಹಾಂತೇಶ ಚಲವಾದಿ, ಸುರೇಶ ಗಲಗಲಿ, ಪಿ.ಎಸ್.ಮಾಸ್ತಿ, ಬಸವರಾಜ ಕೊಂಡಿಕಾರ, ಪ್ರಕಾಶ ದೊಡಮನಿ (ಕಡ್ಲಿಮಟ್ಟಿ) ರವೀಂದ್ರ ಚಲವಾದಿ, ಸಾಗರ ಕೆ.ಬಂಡಿ, ಹೆಚ್.ಆರ್.ಹೊದ್ಲೂರ, ಬಿ.ಎಸ್.ಚಲವಾದಿ, ಎಂ.ವಿ.ಚಲವಾದಿ ವೀರಣ್ಣ ಚಲವಾದಿ, ಶ್ರೀಧರ ಚಲವಾದಿ, ಪಿ.ಎ. ಹೊಸಮನಿ, ಮುತ್ತು ಚಲವಾದಿ, ಎಸ್.ವಾಯ್.ಚಲವಾದಿ, ಆನಂದ ದೊಡಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ವೀರ ವನಿತೆ ಒನಕೆ ಓಬವ್ವಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. 
    ಜಿಲ್ಲಾ ಕಾರ್ಯದರ್ಶಿ ಗ್ಯಾನಪ್ಪ ಚಲವಾದಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಾಮಚಂದ್ರ ನಾಟೀಕಾರ ವಂದಿಸಿದರು.