ಮಹಿಳಾ ವಿವಿ ನಾಮಕರಣ ಅತ್ಯಂತ ಯಶಸ್ವಿ ಕಾರ್ಯಕ್ರಮ: ಸಚಿವ ಎಂ.ಬಿ.ಪಾಟೀಲ

ಮಹಿಳಾ ವಿವಿ ನಾಮಕರಣ ಅತ್ಯಂತ ಯಶಸ್ವಿ ಕಾರ್ಯಕ್ರಮ: ಸಚಿವ ಎಂ.ಬಿ.ಪಾಟೀಲ

ವಿಜಯಪುರ,ಜೂ.19:: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಾಮಕರಣ ಸಮಾರಂಭ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿಪೂರ್ಣ ಕಾರ್ಯಕ್ರಮ ಇದರ ಶ್ರೇಯಸ್ಸು ಈ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಸಲ್ಲುತ್ತದೆ ಎಂದು ಜಲಸಂಪನ್ಮೂಲ ಹಾಗೂ ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಬಿ.ಎಲ್.ಡಿ.ಇ. ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಾಮಕರಣ ಸಮಾರಂಭದ ಯಶಸ್ಸಿಗೆ ಶ್ರಮಿಸಿದ ಸಂಘಟಕರಿಗೆ ಎರ್ಪಡಿಸಿದ್ದ ಉಪಹಾರ ಕೂಟದಲ್ಲಿ ಮಾತನಾಡಿದ ಅವರು ಜಿಲ್ಲೆಯ ಇತಿಹಾಸದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆ ಹಾಗೂ ಬಂಥನಾಳ ಶ್ರೀಗಳ ಜನ್ಮ ಶತಮಾನೋತ್ಸವ, ಹಳಕಟ್ಟಿ ಸಂಶೋಧನಾ ಕೇಂದ್ರದ ಉದ್ಘಾಟನೆ, ಹಳಕಟ್ಟಿ ಸಾಹಿತ್ಯ ಸಮಗ್ರ ಸಂಪುಟಗಳ ಬಿಡುಗಡೆ ಸಮಾರಂಭ, 12ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಶ್ರೀ ಸಿದ್ಧರಾಮೇಶ್ವರ ರಾಜ್ಯಮಟ್ಟದ ಜಯಂತಿ ಉತ್ಸವ, ನವರಸಪುರ ಉತ್ಸವ, ಬಾಬಾಸಾಹೇಬ ಅಂಬೇಡ್ಕರವರ 125ನೇ ಜನ್ಮ ದಿನೋತ್ಸವ, ವೃಕ್ಷ ಅಭಿಯಾನ, ಮ್ಯಾರಾಥಾನ್ ಸ್ಪರ್ಧೇ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಾಮಕರಣ ಸಮಾರಂಭಗಳು ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟನೆಯಾಗಿವೆ ಎಂದರು.

ವಿಜಯಪುರದವರು ಏನೇ ಮಾಡಿದರು ಅದ್ದೂರಿಯಿಂದ ಮಾಡುತ್ತಾರೆ. ಮಹಿಳಾ ವಿ.ವಿಗೆ  ಅಕ್ಕಮಹಾದೇವಿ ಹೆಸರನ್ನು ಇಟ್ಟಿರುವುದು ಮತ್ತು ನಾಮಕರಣ ಸಮಾರಂಭ ಜಿಲ್ಲೆಯ ಇತಿಹಾಸದಲ್ಲಿ ಮೈಲುಗಲ್ಲು ಆಗಿದೆ ಎಂದು ತೋಂಟದ ಸಿದ್ದಲಿಂಗ ಶ್ರೀಗಳು ಆ ಸಮಾರಂಭದಲ್ಲಿಯೇ ಹೇಳಿದಂತೆ ಕಾರ್ಯಕ್ರಮದಲ್ಲಿ ಎಲ್ಲವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ. ನಾನು ನೆಪ ಮಾತ್ರ ಎಂದು ಸಚಿವ ಪಾಟೀಲ ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿ.ವಿ.ಕುಲಪತಿ ಡಾ.ಸಬೀಹಾ ಭೂಮಿಗೌಡ ಮಾತನಾಡಿ 50 ಜನ ಪ್ರಾಧ್ಯಾಪಕರ ಸಣ್ಣ ತಂಡವನ್ನು ಇಟ್ಟುಕೊಂಡ ನಮಗೆ ಇಷ್ಟು ದೊಡ್ಡ ಕಾರ್ಯಕ್ರಮ ಸಂಘಟಿಸುವುದು ಸವಾಲಾಗಿತ್ತು. ಆದರೆ ಸಚಿವ ಎಂ.ಬಿ.ಪಾಟೀಲರು ನನ್ನ ಆತಂಕ ಗಮನಿಸಿ ನಾವು ಇದ್ದೇವೆ, ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಅಭಯ ಹಸ್ತ ನೀಡಿದರು. ಅದರಂತೆ ಎಲ್ಲವೂ ಸರಿಯಾಗಿ ನಡೆದಿದೆ. ನಾವು ಎಷ್ಟು ಕೃತಜ್ಞತೆ ಅರ್ಪಿಸಿದರು ಸಾಲದು ಎಂದರು. 

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಮಾತನಾಡಿ ವಿಜಯಪುರದ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಸಂಘಟನೆ ಮಾಡುವಷ್ಟು ಮಾನವಸಂಪನ್ಮೂಲ ಹಾಗೂ ಸಲಕರಣೆಗಳು ಇದೆ ಎಂಬುದನ್ನು ಈ ಕಾರ್ಯಕ್ರಮ ತೊರಿಸಿಕೊಟ್ಟಿತು. ಶಾಮಿಯಾನ ತಂಡದವರು, ಧ್ವನಿವರ್ಧಕ ವ್ಯವಸ್ಥೆ, ಅಡುಗೆ ವ್ಯವಸ್ಥೆ ಎಲ್ಲವನ್ನು ಸ್ಥಳೀಕರೆ ಮಾಡಿದ್ದಾರೆ. ಇದು ಹೆಮ್ಮೆಯ ವಿಷಯ ಅವರೊಂದಿಗೆ ನಗರದ ನಾಗರಿಕರು ಸಾಮಾನ್ಯ ಕಾರ್ಯಕರ್ತರಂತೆ ಹಗಲಿರುಳು ಶ್ರಮಹಾಕಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದರು. 
ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮಾತನಾಡಿ ಶ್ರೀ ಸಿದ್ಧೇಶ್ವರ ಸಂಸ್ಥೆ, ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಮಾಧ್ಯಮದವರು ಈ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ನೇತೃತ್ವ ವಹಿಸಿದ್ದ ಸಚಿವ ಎಂ.ಬಿ.ಪಾಟೀಲರನ್ನು ಅಭಿನಂದಿಸುತ್ತೇನೆ ಎಂದರು. 

ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಯಾದವಾಡ, ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸಯ್ಯ ಹಿರೇಮಠ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ತಮ್ಮಣ್ಣ ಮೇಲಿನಕೇರಿ, ಉಪವಿಭಾಗಾಧಿಕಾರಿ ಡಾ.ಶಂಕರ ವಣಕ್ಯಾಳ, ವ್ಯಾಪಾರಸ್ಥ ಸಂಘ ಅಧ್ಯಕ್ಷ ರವೀಂದ್ರ ಬಿಜ್ಜರಗಿ ವೇದಿಕೆಯಲ್ಲಿದ್ದರು. ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿವಿ ಮಾಧ್ಯಮ ವಿಭಾಗ ಮುಖ್ಯಸ್ಥ ಓಂಕಾರ ಕಾಖಡೆ ವಂದಿಸಿದರು. ಡಾ.ವಿ.ಡಿ.ಐಹೊಳ್ಳಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಇತ್ತಿಚೆಗೆ ಅಮೇರಿಕಾ ಪ್ರವಾಸ ಕೈಗೊಂಡಿದ್ದ ಡಾ.ಎಸ್.ಟಿ.ಮೆಹರವಾಡೆಯವರನ್ನು ಸಚಿವ ಎಂ.ಬಿ.ಪಾಟಿಲ ಸನ್ಮಾನಿಸಿದರು.