ಎಲ್ಲ ಇಂದ್ರೀಯಗಳಲ್ಲಿ ನೇತ್ರ ಅತ್ಯಂತ ಶ್ರೇಷ್ಠ : ಶ್ರೀ ಸುಬುಧೇಂದ್ರತೀರ್ಥರು

ಎಲ್ಲ ಇಂದ್ರೀಯಗಳಲ್ಲಿ ನೇತ್ರ ಅತ್ಯಂತ ಶ್ರೇಷ್ಠ : ಶ್ರೀ ಸುಬುಧೇಂದ್ರತೀರ್ಥರು

ವಿಜಯಪುರ ಡಿ,11 : ಮನುಷ್ಯನ ಎಲ್ಲ ಇಂದ್ರೀಯಗಳಲ್ಲಿ ನೇತ್ರವು ಅತ್ಯಂತ ಶ್ರೇಷ್ಠವಾದುದು, ಕಾರಣ ಅದರಿಂದ ಭಗವಂತನ ವಿಶ್ವರೂಪವನ್ನು ನೋಡಬಹುದಾಗಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಗಳರು ಹೇಳಿದರು.
ಅವರು  ಬೆಳಿಗ್ಗೆ ತಮ್ಮ ವಿಜಯಪುರ ನಗರದ ಪ್ರಥಮ ಭೇಟಿಯ ಸಂದರ್ಭದಲ್ಲಿ  ಸ್ವಾಗತ ಸಮಿತಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನೇತ್ರವನ್ನು ಸಮರ್ಪಕವಾಗಿ ಬಳಸಿಕೊಂಡು ಒಳ್ಳೆಯದನ್ನು ಮಾತ್ರ ಕಾಣುವ ಮನೋಸ್ಥಿತಿ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದ ಶ್ರೀಗಳು, “ ಆರೋಗ್ಯ ತಪಾಸಣೆಯ ಲಾಭವನ್ನು ಎಲ್ಲರೂ ಜಾತಿ ಮತ ಪಂಥವೆಣಿಸದೇ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮಂತ್ರಾಲಯ ಮಠಕ್ಕೂ- ವಿಜಯಪುರಕ್ಕೂ ಹಿಂದಿನಿಂದಲೂ  ಒಡನಾಟವಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುವ ಉದ್ಧೇಶದಿಂದ ಮತ್ತು ಇಲ್ಲಿಯ ಭಕ್ತಾದಿಗಳು ಆಗ್ರಹದ ಮೇರೆಗೆ ವಿಜಯಪುರ ನಗರಕ್ಕೆ ಆಗಮಿಸಿದ್ದುದಾಗಿ ತಿಳಿಸಿದ ಅವರು,  ತಮ್ಮ ಭೇಟಿಯ ಸಂದರ್ಭದಲ್ಲಿ ತಾವು ಸೂಚಿಸಿದಂತೆ ಭಕ್ತಾದಿಗಳು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗನ್ನು ಆಯೋಜಿಸಿದ್ದಕ್ಕೆ  ಸಂತಸ ವ್ಯಕ್ತಪಡಿಸಿದರು.
ಭವ್ಯ ಸ್ವಾಗತ - ಬೈಕ್ ರ್ಯಾಲಿ :
ಐತಿಹಾಸಿಕ ವಿಜಯಪುರ ನಗರಕ್ಕೆ  ಪ್ರಪ್ರಥಮ ಬಾರಿಗೆ ಇಂದು ಬೆಳಿಗ್ಗೆ  ಆಗಮಿಸಿದ  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಭವ್ಯ ಸ್ವಾಗತ ನೀಡಲಾಯಿತು.
ರಾಷ್ಟ್ರೀಯ ಹೆದ್ದಾರಿಯ ಮನಗೂಳಿ ರಸ್ತೆಯ ಟೋಲ್ ನಾಕಾದ ಬಳಿ ಶ್ರೀಗಳನ್ನು ಸ್ವಾಗತ ಸಮಿತಿ ಪದಾಧಿಕಾರಿಗಳು ಸೇರಿದಂತೆ ಯುವಕರು ಪುಷ್ಪ ಹಾರ ಸಮರ್ಪಿಸಿ ಬರಮಾಡಿಕೊಂಡರು.
ಯುವಕರ ಪಡೆ ತಮ್ಮ ಬೈಕ್‍ಗಳ ಮೂಲಕ ಶ್ರೀಗಳ ವಾಹನದ ಮುಂದೆ ರ್ಯಾಲಿ ಮೂಲಕ ಬಾಗಲಕೋಟ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕರೆತಂದರು. ಅಲ್ಲಿ ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕರು ಸಿಬ್ಬಂದಿ ಹಾಗೂ ಭಕ್ತರೊಂದಿಗೆ ಮಠದ ಅರ್ಚಕರು ಪೂರ್ಣ ಕುಂಭದ ಸ್ವಾಗತ ನೀಡಿದರು.
ಶ್ರೀಗಳು ವೃಂದಾವನಕ್ಕೆ ಮಂಗಳಾರತಿ ಮಾಡಿದರು.  ಬಳಿಕ ಶ್ರೀಮಠದ ಎಲ್ಲೆಡೆ ಸುತ್ತಾಡಿ ಆವರಣವನ್ನೆಲ್ಲ ಅವಲೋಕಿಸಿದರು.
ಬಳಿಕ ಬೈಕ್ ರ್ಯಾಲಿಯ ಮುಖಾಂತರ ಶ್ರೀಗಳನ್ನು ದೀವಟಗೇರಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕರೆತರಲಾಯಿತು.  ಅಲ್ಲಿ ಶ್ರೀಗಳಿಗೆ ಪೂರ್ಣ ಕುಂಭದ ಸ್ವಾಗತ ನೀಡಲಾಯಿತು.  ಮಠದ ಅಧ್ಯಕ್ಷ ಅಶೋಕ ಕಾಳಗಿ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಸ್ವಾಗತ ಸಮಿತಿ ಸದಸ್ಯರಾದ ಡಾ. ಆರ್ ಜಿ ಮಂಗಲಗಿ,  ಆರ್ ಬಿ ಕುಲಕರ್ಣಿ,  ಆರ್ ಆರ್ ಕುಲಕರ್ಣಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೃಂದಾವನಕ್ಕೆ ಮಂಗಳಾರತಿಗೈದ ಬಳಿಕ ಭಕ್ತವೃಂದಕ್ಕೆ ಫಲ ಮಂತ್ರಾಕ್ಷತೆ ನೀಡಿದರು. ನಂತರ ಶ್ರೀಮಠದಲ್ಲಿ ಕಂಪ್ಯೂಟರ  ಹಾಗೂ ಜನರೇಟರ್ ಗಳ ಉದ್ಘಾಟನೆ ನೆರವೇರಿಸಿದರು.
ಬಳಿಕ ಸರದೇಶಪಾಂಡೆ ಕಾಲನಿಯಲ್ಲಿರುವ ಶ್ರೀ ರುಕ್ಮಾಂಗದ ಶಾಲೆಯಲ್ಲಿ ಶ್ರೀಗಳು ಉಚಿತ ನೇತ್ರ ಹಾಗೂ ಆರೋಗ್ಯ  ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಡಾ. ಆರ್ ಜಿ ಮಂಗಲಗಿ,  ಡಾ ಆನಂದ ಕಣಬೂರ, ಡಾ. ಬದಾಮಿ, ಡಾ. ಶ್ರೀಕಾಂತ ಮಿರಜಕರ ಆರೋಗ್ಯ ಹಾಗೂ ನೇತ್ರ ತಪಾಸಣೆ ಮಾಡಿದರು. ಸುಮಾರು 100 ಕ್ಕೂ ಮಿಕ್ಕಿ ಜನರು ಇದರ ಲಾಭ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ  ಸೊಲಾಪುರಕರ, ದೇಶಪಾಂಡೆ,  ಗಾಯಿ,  ಅಲ್ಲದೇ ಶಾಲೆಯ ಮುಖ್ಯಾಧ್ಯಾಪಕರು ಶಿಕ್ಷಕ ವರ್ಗ ಮುಂತಾದವರು ಉಪಸ್ಥಿತರಿದ್ದರು.