`ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡುತ್ತಿದ್ದರಿಂದ ಹೆರಿಗೆಯಲ್ಲಿ ತಾಯಿ ಸಾವನ್ನಪ್ಪುತ್ತಿದ್ದಾಳೆ’

`ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡುತ್ತಿದ್ದರಿಂದ ಹೆರಿಗೆಯಲ್ಲಿ ತಾಯಿ ಸಾವನ್ನಪ್ಪುತ್ತಿದ್ದಾಳೆ’

   ಧಾರವಾಡ, ಅ.16 : ಹೆಣ್ಣುಮಕ್ಕಳು ಹದಿನೆಂಟು ವಷರ್Àಗಳಿದ್ದಾಗಲೇ ಮದುವೆ ಮಾಡುವ ಪರಂಪರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮುಂದುವರೆದಿದ್ದು ಇದರಿಂದ ಮೊದಲ ಹೆರಿಗೆ ಕಾಲಕ್ಕೆ ತಾಯಂದಿರ ಸಾವು ಆಗುತ್ತಲೇ ಇದೆ ಎಂದು ನಿವೃತ್ತ ವೈದ್ಯಾಧಿಕಾರಿಗಳು ಹಾಗೂ ಹುಬ್ಬಳ್ಳಿಯ ಐ.ಎಂ.ಎ. ಅಧ್ಯಕ್ಷರಾದ ಡಾ. ವ್ಹಿ.ಬಿ. ನಿಟಾಲಿ ಹೇಳಿದರು. 
    ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಶ್ರೀಮತಿ ರಶ್ಮಿ ಮಂಜುನಾಥ ನಾಯಕ ದತ್ತಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. 
    ಮುಂದುವರೆದು ಡಾ. ನಿಟಾಲಿ ಮಾತನಾಡುತ್ತಾ, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮತ್ತು ಅವಕಾಶಗಳಿದ್ದರೂ ತೀವ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಆರೋಗ್ಯ ಕ್ಷೇತ್ರವನ್ನು ಸುಧಾರಣೆ ಮಾಡುವಲ್ಲಿ ಹಿಂದೇಟು ಆಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರು ಎಲ್ಲವನ್ನು ನಿರ್ವಹಿಸಲು ಪ್ರಯತ್ನಿಸುತ್ತಾರೆ. ಇದರಿಂದ ಸಾವು ನೋವುಗಳು ಹೆಚ್ಚಾಗುವುದನ್ನು ಕಾಣುತ್ತೇವೆ. ಸರಕಾರಿ ಆಸ್ಪತ್ರೆಯಲ್ಲಿ ಹತ್ತಾರು ವೈದ್ಯರಿರುತ್ತಾರೆ. ತಕ್ಷಣ ಲಭ್ಯರಾಗುವರು. ಅದಕ್ಕಾಗಿ ಸರಕಾರಿ ಆಸ್ಪತ್ರೆಗಳ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು.
    ಮಹಿಳೆಯರಲ್ಲಿ ಆರೋಗ್ಯದ ಅರಿವು ಮೂಡಿಸುವುದಕ್ಕಾಗಿ ಸರಕಾರ ಆಶಾ ಕಾರ್ಯಕರ್ತರನ್ನು ನೀಡಿದೆ. ಆದಾಗ್ಯೂ ಮಹಿಳೆಯರು ಅದರಲ್ಲಿಯೂ ಗರ್ಭಿಣಿಯರು, ಬಾಣಂತಿಯರು ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡುತ್ತಿದ್ದಾರೆ. ಹೀಗಾಗಿ ಹಲವು ಸಂದರ್ಭದಲ್ಲಿ ವೈದ್ಯರಿಗೆ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಉಳಿಸಿಕೊಳ್ಳುವುದು ಸವಾಲಾಗುತ್ತದೆ ಎಂದರು.
    ಮಹಿಳೆಯರು ಗರ್ಭಿಣಿಯಾದಾಗ ಬಹಳಷ್ಟು ಎಚ್ಚರಿಗೆ ವಹಿಸದಿದ್ದರೆ ಗರ್ಭಪಾತದಂತಹ ಅಪಾಯಗಳನ್ನು ಹಿಡಿದು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಎಲ್ಲ ಸದಸ್ಯರ ಕಾಳಜಿ ಗರ್ಭಿಣಿ ಮೇಲೆ ಇರಬೇಕಾಗುತ್ತದೆ. ವಯಸ್ಸಾದ ವೈದ್ಯರಿಂದ ಆರೋಗ್ಯ ಸಲಹೆ ಪಡೆಯಬೇಕು. ಯುವ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು. 
    ವೈಜ್ಞಾನಿಕ ಮನೋಭಾವನೆ ಎಲ್ಲಿರುತ್ತದೆಯೋ ಅಲ್ಲಿ ಸಾವು ನೋವುಗಳು ಕಡಿಮೆ. ಸ್ವಚ್ಚತೆಯ ಅರಿವು ಹೊಂದುವುದರ ಮೂಲಕ ನಮ್ಮ ಆರೋಗ್ಯವನ್ನು ನಾವೇ ಕಾಯ್ದುಕೊಳ್ಳಬಹುದು. ವೈದ್ಯರು ಆರೋಗ್ಯಕ್ಕಾಗಿ ಸಲಹೆ ನೀಡುವವರೆ ವಿನಃ ಅವರೇ ಆರೋಗ್ಯ ಕಾಪಾಡುವುದಿಲ್ಲ. ತಮ್ಮ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕೆಂದು ಡಾ. ವ್ಹಿ. ಬಿ. ನಿಟಾಲಿ ಹೇಳಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಡಾ. ಪಾಟೀಲ ಪುಟ್ಟಪ್ಪ ದತ್ತಿ  ಉದ್ಘಾಟಿಸಿ ಮಾತನಾಡಿ, ಮನುಷ್ಯನ ದೇಹ ಆಹಾರ ತುಂಬುವಂತ ಚೀಲವಲ್ಲ. ನಾವು ಸೇವಿಸುವ ಆಹಾರದ ಆಯ್ಕೆ ಮೂಲಕ ನಮ್ಮ ವಯಸ್ಸನ್ನು ನಾವೇ ನಿರ್ಧರಿಸಬಹುದು. ನಾವು ಎಷ್ಟು ವರ್ಷ ಬದುಕಬೇಕು ಎಂಬುದು ನಮ್ಮ ಕೈಯಲ್ಲೇ ಇರುತ್ತದೆ ಎಂದರು. 
    ವೇದಿಕೆ ಮೇಲೆ ಹಿರಿಯ ನ್ಯಾಯವಾದಿ ಶ್ರೀಮತಿ ಪ್ರಫುಲ್ಲಾ ನಾಯಕ ಹಾಗೂ ದತ್ತಿ ದಾನಿ ಕೆ.ಎಚ್. ನಾಯಕ ಉಪಸ್ಥಿತರಿದ್ದರು. ನಿಂಗಣ್ಣ ಕುಂಟಿ, ಕೆ. ಜಗುಚಂದ್ರ, ಮಾರ್ತಾಂಡಪ್ಪ ಕತ್ತಿ ಅತಿಥಿಗಳನ್ನು ಗೌರವಿಸಿದರು. 
    ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
     ಕಾರ್ಯಕ್ರಮದಲ್ಲಿ ಶಿವಶಂಕರ ಹಿರೇಮಠ, ಡಾ. ಎಚ್.ಎ. ಪಾಶ್ರ್ವನಾಥ, ಅನಿಲ ದೇಸಾಯಿ, ಪ್ರಕಾಶ ಮಲ್ಲಿಗವಾಡ, ಬಿ.ಕೆ. ಹೊಂಗಲ, ಎಸ್.ಎಂ. ದಾನಪ್ಪಗೌಡರ ಹಾಗೂ ದಿ. ರಶ್ಮಿ ನಾಯಕ ಅವರ ತಾಯಿ ಬೇಬಿ ನಾಯಕ, ಪತಿ ಮಂಜುನಾಥ, ಹರ್ಷ ನಾಯಕ, ನಾಗೇಶ ನಾಯಕ ಸೇರಿದಂತೆ ನಾಯಕ ಕುಟುಂಬ ವರ್ಗದವರು, ಬಂಧುಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.