ಮೊದಲು ಕನ್ನಡಿಗ, ನಂತರ ಭಾರತೀಯ ಎಂಬ ಭಾವನೆ ಎಲ್ಲರಲ್ಲಿಯೂ ಬರಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೊದಲು ಕನ್ನಡಿಗ, ನಂತರ ಭಾರತೀಯ ಎಂಬ ಭಾವನೆ ಎಲ್ಲರಲ್ಲಿಯೂ ಬರಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ನ,04 : ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ರಾಜಧಾನಿಯ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಾನ್ಯ ಸಿಎಂ ಅವರು, ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವಲ್ಲಿ ವಿಫಲರಾಗಿರುವ ನಾವು, ಕನ್ನಡೇತರರನ್ನು ಪ್ರೀತಿಸುವ ಉದಾರತನ ತೋರಬೇಕೇ ಹೊರತು ಕನ್ನಡ ಕಲಿಯದವರ ಬಗ್ಗೆಯಲ್ಲ. ರಾಜ್ಯದಲ್ಲಿ ವಾಸಿಸುವವರು ‘ಮೊದಲು ಕನ್ನಡಿಗ, ನಂತರ ಭಾರತೀಯ’ ಎಂಬ ಭಾವನೆ ಎಲ್ಲರಲ್ಲಿಯೂ ಬರಬೇಕು ಎಂದರು.ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡಿಗರೇ ಆಗಿದ್ದು, ಕಡ್ಡಾಯವಾಗಿ ಕನ್ನಡ ಕಲಿಯದಿದ್ದರೆ ಕರ್ನಾಟಕಕ್ಕೆ ಅವಮಾನ ಮಾಡಿದಂತಾಗುತ್ತದೆ, ನೆಲದ ಭಾಷೆ ಕಲಿಯಲು ಅನ್ಯ ಭಾಷಿಕರು ಸಂಕಲ್ಪ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ಇಡೀ ಭಾಷಣದಲ್ಲಿ ಅವರು ರಾಜ್ಯದಲ್ಲಿ ಕನ್ನಡ ಭಾಷೆ ರಕ್ಷಣೆ, ಶಿಕ್ಷಣ ಮಾಧ್ಯಮ, ಬದಲಾದ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಭಾಷೆಯ ಮಹತ್ವ, ಸಮಾನ ಶಿಕ್ಷಣದ ಬಗ್ಗೆ ಮಾತಾಡಿದ್ದು ವಿಶೇಷವಾಗಿತ್ತು. 
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಮುಗಿಬೀಳುವ ಪೋಷಕರು, ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳಿಗೆ ಕಳಿಸಲು ತಾತ್ಸಾರ ಮಾಡುವುದೇಕೆ.? ಪೋಷಕರಿಗೆ ಇಂಗ್ಲಿಷ್ ಭಾಷೆ ಕುರಿತು ಹೆಚ್ಚಿನ ವ್ಯಾಮೋಹ ಇರುವುದು ಒಳ್ಳೆಯ ಪ್ರವೃತ್ತಿಯಲ್ಲ, ಮಾತೃ ಭಾಷೆಯಲ್ಲಿ ಕಲಿತಾಗ ಮಾತ್ರ ಅರ್ಥ ಮಾಡಿಕೊಳ್ಳಲು ಹಾಗೂ ಅಭಿವ್ಯಕ್ತಿಪಡಿಸುವುದು ಸುಲಭವಾಗುತ್ತದೆ ಹಾಗೂ ಸರ್ಕಾರಿ ಶಾಲೆಗಳಲ್ಲಿಯೂ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ. ಎಂದರು. ಸರ್. ಎಂ. ವಿಶ್ವೇಶ್ವರಯ್ಯ, ಡಾ. ಸಿ.ಎನ್. ಆರ್. ರಾವ್ ಅವರು ಕನ್ನಡದಲ್ಲಿ ಕಲಿತು ಇಂಜಿನಿಯರ್, ವಿಜ್ಞಾನಿಗಳಾಗಿದ್ದರು. ನಾನು ಸಹ ಕನ್ನಡ ಮಾಧ್ಯಮದಲ್ಲಿ ಕಲಿತು ಇಂದು ಮುಖ್ಯಮಂತ್ರಿಯಾಗಿದ್ದೇನೆ ಎಂದು ಉದಾಹರಣೆ ನೀಡಿದರು.