ಶಾಸಕರ ವಿರುದ್ಧ ಹೇಳಿಕೆ : ವಿಜಯಾನಂದ ಕಾಶಪ್ಪನವರ ಆಕ್ರೋಶ

ಶಾಸಕರ ವಿರುದ್ಧ ಹೇಳಿಕೆ : ವಿಜಯಾನಂದ ಕಾಶಪ್ಪನವರ ಆಕ್ರೋಶ

ಬಾಗಲಕೋಟ,ಅ.7: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹುನಗುಂದದ ಶಾಸಕರಾದ ವಿಜಯಾನಂದ ಕಾಶಪ್ಪನವರ ಮತ್ತು ಅವರ ಕುಟುಂಬದ ಬಗ್ಗೆ ಕೆಲವು ಬಿಜೆಪಿಯ ಕಿಡಗೇಡಿಗಳು ಕೀಳು ಅಭಿರುಚಿಯ ಕಮೇಂಟ್ಸ ಮಾಡಿದ್ದು ಖಂಡನೀಯ ಎಂದು ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಚಂದ್ರಶೇಖರ ರಾಠೋಡ, ನಗರಸಭೆ ಸದಸ್ಯ ಗೋವಿಂದ ಬಳ್ಳಾರಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪ್ರವೀಣ ಪಾಟೀಲ, ಪಕ್ಷದ ಮುಖಂಡರಾದ ಪ್ರಭು ಹಗರಟಗಿ, ಗೋಪಾಲ ಚವ್ಹಾಣ, ಬಸವರಾಜ ಕೋತಿನ್, ಸುರೇಶ ನಾಯಕ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ಅವರು, ಹುನಗುಂದ ಮತಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದ ಅನೇಕ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಜನಾನುರಾಗಿ ಆಗಿರುವ ಶಾಸಕರು, ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಗೆಲುವು ನನ್ನದೇ. ಅದು ಮೋದಿ ಆದರೂ ಆಗಲಿ ಅಥವಾ ಯಡಿಯೂರಪ್ಪ ಅವರಾದರೂ ಆಗಲಿ ಎಂದು ಹೇಳಿದ್ದು, ಅವರ ಆತ್ಮವಿಶ್ವಾಸ ಮತ್ತು ಅವರು ತಮ್ಮ ಮತದಾರರ ಮೇಲೆ ಇಟ್ಟಿರುವ ಭರವಸೆ ತೋರಿಸುತ್ತದೆ. ಅದನ್ನೇ ದೊಡ್ಡದಾಗಿ ಬಿಂಬಿಸಿ, ಬಿಜೆಪಿಯ ಕೆಲವರು ಫೇಸ್‍ಬುಕ್‍ನಲ್ಲಿ ಅವಹೇಳನಕಾರಿಯಾಗಿ ಕಮೇಂಟ್ಸ ಹಾಕಿದ್ದು, ಅವರ ಕೀಳು ಮಟ್ಟದ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಮೊನ್ನೆ ಬಾಗಲಕೋಟೆಯಲ್ಲಿ ನಡೆದ 25ರಿಂದ 30 ಜನ ಮಾತ್ರ ಪಾಲ್ಗೊಂಡಿದ್ದ ಬಿಜೆಪಿಯವರ ಪ್ರತಿಭಟನೆಯಲ್ಲಿ ಕೂಡ ಬಿಜೆಪಿಯ ಪದಾಧಿಕಾರಿಗಳಾದ ರಾಜು ನಾಯ್ಕರ ಮತ್ತು ರಾಜು ರೇವಣಕರ ಅವರು, ಶಾಸಕರ ಮನೆ ಹೊಗಬೇಕಾಗುತ್ತದೆ ಎಂದು ವೀರಾವೇಷದಲ್ಲಿ ಮಾತನಾಡಿದ್ದು, ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ರೀತಿ ಹೇಳಿಕೆ ಕೊಡುವುದು ಬಹಳ ಸುಲಭ. ‘ನಮಗೂ ಗೊತ್ತು ಉತ್ತರ ಕುಮಾರನ ಪೌರುಷ ಒಲೆಯ ಮುಂದೆ’ ಎಂದು ಹೀಯಾಳಿಸಿದ್ದಾರೆ.
ಯಾರನ್ನೋ ಮೆಚ್ಚಿಸಲು ಈ ರೀತಿಯಾಗಿ ಬಾಯಿ ಹರಿಬಿಟ್ಟು ಮಾತನಾಡಿದರೆ, ಮುಂದಾಗುವ ಗಂಭೀರ ಪರಿಣಾಮಗಳಿಗೆ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮುಂದೆ ಯಾರೇ ಆಗಲಿ ಈ ರೀತಿಯ ಕೀಳು ಮಟ್ಟದ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿಯ ಹಿರಿಯರು ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿ ಹೇಳಬೇಕು ಎಂದು ಚಂದ್ರಶೇಖರ ರಾಠೋಡ ಮತ್ತು ಪ್ರಮುಖರು ಒತ್ತಾಯಿಸಿದ್ದಾರೆ.