ಸಿದ್ದಸಿರಿ ಬ್ಯಾಂಕಿನ ಮಹಿಳಾ ಶಾಖೆ ಆರಂಭ : ಯತ್ನಾಳ

ಸಿದ್ದಸಿರಿ ಬ್ಯಾಂಕಿನ ಮಹಿಳಾ ಶಾಖೆ ಆರಂಭ : ಯತ್ನಾಳ

ವಿಜಯಪುರ,ಅ.14: ಸಿದ್ಧಸಿರಿ ಸಹಕಾರಿ ಸೌಹಾರ್ದ ಬ್ಯಾಂಕಿನ 11 ನೇ ವರ್ಷದ ಕೊಡುಗೆಯಾಗಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಖೆಯೊಂದನ್ನು ಪ್ರಾರಂಭ ಮಾಡುವ ಸಂಕಲ್ಪ ಮಾಡಿರುವುದಾಗಿ ಬ್ಯಾಂಕಿನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದ ರಸ್ತೆಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಹತ್ತಿರದಲ್ಲಿ ಈ ಶಾಖೆ ಆರಂಭವಾಗಲಿದೆ. ಈ ಶಾಖೆಯಲ್ಲಿ ಬ್ಯಾಂಕಿನ ಎಲ್ಲ ಮಹಿಳಾ ಸದಸ್ಯರ ಖಾತೆಗಳನ್ನು ವರ್ಗಾಯಿಸಲಾಗುವುದು. ಅಲ್ಲದೇ ಶಾಖೆಯಲ್ಲಿ ಬರೀ ಮಹಿಳಾ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ವರ್ಷದ 365 ದಿನ 24 ಗಂಟೆ ಕಾರ್ಯನಿರ್ವಹಿಸುವ ಏಕೈಕ ಸೌಹಾರ್ದ ಬ್ಯಾಂಕ್ ಎಂದು ಹೆಗ್ಗಳಿಕೆ ಗಳಿಸಿರುವ ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಮಹಿಳೆಯರಿಂದ ನಡೆಯುವ ಮಹಿಳಾ ಶಾಖೆಯನ್ನು ಪ್ರಾರಂಭಿಸುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್ 87 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಷೇರುದಾರರಿಗೆ ಶೇ.12 ರಷ್ಟು ಲಾಭಾಂಶ ನೀಡಲಾಗುವುದು ಎಂದು ಪ್ರಕಟಿಸಿದರು.
ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಒಟ್ಟು 88 ಶಾಖೆಗಳನ್ನು ಹೊಂದಿದ್ದು, ಇನ್ನೂ ನೂತನವಾಗಿ 25 ಶಾಖೆಗಳನ್ನು ಆರಂಭಿಸುವ ಅನುಮತಿ ಸಹ ದೊರಕಿದೆ. 1,00,2004 ಲಕ್ಷ ಸದಸ್ಯರನ್ನು ಹೊಂದಿರುವ ಬ್ಯಾಂಕ್ 4.1 ಕೋಟಿ ರೂ. ಷೇರು ಬಂಡವಾಳ, ಸದಸ್ಯರ ಠೇವಣಿಗಳು 234.04 ಕೋಟಿ ರೂ., 13.63 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 176.69 ಕೋಟಿ ರೂ. ಸಾಲ ಹಾಗೂ ಮುಂಗಡ ಹಣ ನೀಡಲಾಗಿದ್ದು, 247.51 ಕೋಟಿ ರೂ. ದುಡಿಯುವ ಬಂಡವಾಳವಿದೆ ಎಂದು ಬ್ಯಾಂಕಿನ ಆರ್ಥಿಕ ವಿವರಣೆ ನೀಡಿದರು.

ಮಹಿಳಾ ಸಬಲೀಕರಣಕ್ಕಾಗಿಯೂ ಬ್ಯಾಂಕ್ ಶ್ರಮಿಸುತ್ತಿದೆ. ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ 380 ಸ್ವ-ಸಹಾಯ ಗುಂಪುಗಳ  4 ಸಾವಿರ ಸದಸ್ಯರಿಗೆ 12.5 ಕೋಟಿ ರೂ.ನಷ್ಟು ಸಾಲ ವಿತರಣೆ ಮಾಡಲಾಗಿದೆ. 28 ಶಾಖೆಗಳಲ್ಲಿ ಇ-ಸ್ಟಾಪಿಂಗ್, ರೈಲ್ವೇ-ವಿಮಾನ ಟಿಕೇಟ್ ಬುಕ್ಕಿಂಗ್ ಸೇರಿದಂತೆ ಗ್ರಾಹಕರಿಗೆ ಅನುಕೂಲವಾಗುವ ಎಲ್ಲ ಸೇವೆಗಳನ್ನು ನೀಡಲಾಗುತ್ತಿದೆ ಎಂದರು. 
ಶ್ರೀ ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ನಿರ್ದೇಶಕ ಬಸಯ್ಯ ಹಿರೇಮಠ, ವಿಜಯಕುಮಾರ ಚವ್ಹಾಣ, ರಾಘವ ಅಣ್ಣಿಗೇರಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.