ಆಲಮೇಲ ತಾಲೂಕಾ ಹೋರಾಟ ಸಮಿತಿಯಿಂದ ಮನವಿ

ಆಲಮೇಲ ತಾಲೂಕಾ ಹೋರಾಟ ಸಮಿತಿಯಿಂದ ಮನವಿ

ವಿಜಯಪುರ,ಸೆ.11: ಸಿಂದಗಿ ತಾಲೂಕಿನ ಹೋಬಳಿಯಾಗಿರುವ ಆಲಮೇಲ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಆಲಮೇಲ ತಾಲೂಕಾ ಹೋರಾಟಗಾರರು ಹಾಗೂ ನಾಗರಿಕರು ಪಾದಯಾತ್ರೆ ಮೂಲಕ ಸೋಮವಾರ ವಿಜಯಪುರ ತಲುಪಿದರು. 
ಆಲಮೇಲ ತಾಲೂಕು ಕೇಂದ್ರ ಆಗಲೇಬೇಕು. ತಾಲೂಕಾಗಲಿ ನಮ್ಮ ಆಲಮೇಲ.. ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ನಗರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ವಿವಿಧ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಹಕ್ಕೊತ್ತಾಯ ಮಂಡಿಸಿದರು. ಆಲಮೇಲದ ಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮೀಜಿ ಅವರು ಸಹ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಆಲಮೇಲ ತಾಲೂಕಾ ಹೋರಾಟ ಸಮಿತಿ ಪ್ರಮುಖರು,  ಜನಸಂಖ್ಯೆ ಮೊದಲಾದ ಮಾನದಂಡಗಳ ಆಧಾರದಲ್ಲಿಯೂ ಸಹ ಆಲಮೇಲ ಪಟ್ಟಣ ತಾಲೂಕಾ ಕೇಂದ್ರವಾಗುವ ಎಲ್ಲ ಅರ್ಹತೆ ಪಡೆದುಕೊಂಡಿದೆ. ಆದರೆ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಹೊಸ 7 ತಾಲೂಕುಗಳನ್ನು ರಚನೆ ಮಾಡಿದೆ, ಆದರಲ್ಲಿ ಆಲಮೇಲ ಪಟ್ಟಣವನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದರು. ಆಲಮೇಲ ಪಟ್ಟಣದಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ನಿರಂತರ ಹೋರಾಟ ಮಾಡಿ ತಾಲೂಕಾ ಕೇಂದ್ರ ಸ್ಥಾನಮಾನಕ್ಕಾಗಿ ಒತ್ತಾಯಿಸಲಾಗುತ್ತಿದೆ, ಆದರೂ ಸಹ ಸರ್ಕಾರ ನಮ್ಮ ಬೇಡಿಕೆ ಪರಿಗಣಿಸಿಲ್ಲ, ಇದು ಆಲಮೇಲ ಪಟ್ಟಣದ ಪ್ರತಿಯೊಬ್ಬ ನಿವಾಸಿಗೂ ನಿರಾಶೆ ತಂದಿದೆ ಎಂದರು.
ವಾಸುದೇವ ಸಮಿತಿ ಸಹ ಆಲಮೇಲ ಪಟ್ಟಣ ತಾಲೂಕಾ ಕೇಂದ್ರವಾಗಲು ಸೂಕ್ತವಾಗಿದೆ ಎಂದು ಶಿಫಾರಸ್ಸು ಮಾಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಈ ಶಿಫಾರಸ್ಸನ್ನು ಪರಿಗಣಿಸಿಲ್ಲ. ರಸ್ತಾ ರೋಖೋ, ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹ ಹೀಗೆ ಹಲವಾರು ಹಂತದ ಹೋರಾಟ ಕೈಗೊಂಡಿದ್ದರೂ ಸಹ ಆಲಮೇಲ ಜನತೆಯ ಬೇಡಿಕೆ ಈಡೇರಿಕೆಗೆ ಮಾತ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದರು. ರಾಜ್ಯ ಸರ್ಕಾರ ಕೂಡಲೇ ಆಲಮೇಲ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ನಿವಾಸಿಗಳು ಒಕ್ಕೊರೆಲಿನಿಂದ ಆಗ್ರಹಪಡಿಸಿದರು.
ಘೋಷಣೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ...!!
ಆಲಮೇಲ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂಬ ಒತ್ತಾಯ ನ್ಯಾಯಯುತವಾಗಿದೆ. ಈ ನ್ಯಾಯಯುತವಾದ ಬೇಡಿಕೆಯನ್ನು ಸರ್ಕಾರ ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆಗೆ ಅಣಿಯಾಗಲಾಗುವುದು. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಲಮೇಲ ನಿವಾಸಿಗಳು ಎಚ್ಚರಿಕೆ ನೀಡಿದರು.