ಸುಗ್ರೀವಾಜ್ಞೆಗೆ ಅಂಕಿತ ಹಾಕುವಂತೆ ಆಗ್ರಹಿಸಿ ರಾಜಭವನ ಚಲೋ

ಸುಗ್ರೀವಾಜ್ಞೆಗೆ ಅಂಕಿತ ಹಾಕುವಂತೆ ಆಗ್ರಹಿಸಿ ರಾಜಭವನ ಚಲೋ

ವಿಜಯಪುರ,ಅ.10: ಬಡ್ತಿ ಮೀಸಲಾತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಒಪ್ಪದಿರುವ ರಾಜ್ಯಪಾಲರ ಕ್ರಮ ಸರಿಯಲ್ಲ. 
ಈ ಹಿನ್ನೆಲೆಯಲ್ಲಿ ಈ ಸುಗ್ರೀವಾಜ್ಞೆಗೆ ಅಂಕಿತ ಹಾಕುವಂತೆ ಒತ್ತಾಯಿಸಿ ಎಲ್ಲ ದಲಿತ ಸಂಘಟನೆಗಳ ನೇತೃತ್ವದಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ರಾಜಭವನ ಚಲೋ ಸಂಘಟಿಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಡಿ.ಜಿ. ಸಾಗರ್ ನರೋಣಾ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಬಡ್ತಿ ಮೀಸಲಾತಿ ಸಂವಿಧಾನ ಕರುಣಿಸಿದ ಹಕ್ಕು. ಈ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಸಹ ಇಲ್ಲ. ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಸಹ ಹೊರಡಿಸಿತ್ತು. ಆದರೆ ರಾಜ್ಯಪಾಲರು ಈ ಸುಗ್ರಿವಾಜ್ಞೆಗೆ ಅಂಕಿತ ಹಾಕಿಲ್ಲ. ಬಡ್ತಿ ಮೀಸಲಾತಿಯ ಅವಶ್ಯಕತೆಯ ಕುರಿತು ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ರಾಜಭವನ ಚಲೋ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. 14 ಕ್ಕೂ ಹೆಚ್ಚು ದಲಿತ ಸಂಘಟನೆಗಳ ಪದಾಧಿಕಾರಿಗಳು ಒಗ್ಗೂಡಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಿಸಿದರು.
ಬಡ್ತಿ ಮೀಸಲಾತಿ ಅತ್ಯಂತ ಅವಶ್ಯಕತೆ ಇದೆ. ಇಂದಿಗೂ ಸಹ ಉನ್ನತ ಹುದ್ದೆಗಳಲ್ಲಿ ಎಸ್‍ಸಿ ಹಾಗು ಎಸ್‍ಟಿ ಸಮುದಾಯದವರ ಪ್ರಾತಿನಿಧ್ಯ ಕಡಿಮೆ ಇದೆ. ರಾಜ್ಯ ಸರ್ಕಾರ ಸಹ ಉನ್ನತ ಹುದ್ದೆಗಳಲ್ಲಿ ಎಸ್.ಸಿ. ಹಾಗೂ ಎಸ್.ಟಿ. ಸಮುದಾಯದವರ ಪ್ರಾತಿನಿಧ್ಯದ ಕುರಿತಾಗಿ ಹಿರಿಯ ಎಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ವರದಿ ರಚಿಸಲು ಹೇಳಿತ್ತು, ಆ ವರದಿ ಸಹ ಎಸ್.ಸಿ. ಹಾಗೂ ಎಸ್.ಟಿ. ಸಮುದಾಯದವರ ಪ್ರಾತಿನಿಧ್ಯ ಕಡಿಮೆ ಇರುವುದಾಗಿ ಹೇಳಿದೆ ಎಂದರು.
ಏಕತೆಗಾಗಿ ವಿಚಾರ ಸಂಕಿರಣ 13ರಂದು 
ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಇದೇ ದಿನಾಂಕ 13 ರಂದು ಬೆಳಿಗ್ಗೆ 11.30 ಕ್ಕೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಏಕತೆಗಾಗಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 102 ನೇ ಜಯಂತೋತ್ಸವ ಪ್ರಯುಕ್ತ ಈ ವಿಚಾರ ಸಂಕಿರಣ ಸಂಘಟಿಸಲಾಗಿದೆ.
ಯರನಾಳ ವಿರಕ್ತಮಠದ ಶ್ರೀ ಗುರುಸಂಗನಬಸವ ಮಹಾಸ್ವಾಮಿಗಳು, ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ವಿಚಾರ ಸಂಕಿರಣಕ್ಕೆ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸುವರು. ಅವಳಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ ಹೋರಾಟದ ಹಾಡುಗಳ ಗಾಯನ ನಡೆಯಲಿದೆ. 
ಸಂಘಟನೆಯ ಪ್ರಮುಖರಾದ ರಮೇಶ ಆಸಂಗಿ, ವಿನಾಯಕ ಗುಣಸಾಗರ, ವೈ.ಸಿ. ಮಯೂರ, ಶರಣು ಸಿಂಧೆ, ರಮೇಶ ಧರಣಾಕರ, ಸಿದ್ಧು ರಾಯಣ್ಣವರ, ಅಶೋಕ ಚಲವಾದಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.