ಪತ್ನಿಯನ್ನು ಭೇಟಿಯಾಗಲು ಕುಲಭೂಷಣ್​ಗೆ ಅವಕಾಶ ನೀಡಿದ ಪಾಕ್​

ಪತ್ನಿಯನ್ನು ಭೇಟಿಯಾಗಲು ಕುಲಭೂಷಣ್​ಗೆ ಅವಕಾಶ ನೀಡಿದ ಪಾಕ್​

ನವದೆಹಲಿ,ನ.11: ಕೇಂದ್ರ ಸರ್ಕಾರದ ಸತತ ಪ್ರಯತ್ನದ ಫಲವಾಗಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಕುಲಭೂಷಣ್​ ಜಾಧವ್​​ ಅವರನ್ನು ಭೇಟಿ ಮಾಡಲು ಕುಲಭೂಷಣ್​ ಪತ್ನಿಗೆ ಪಾಕಿಸ್ತಾನ​ ಸರ್ಕಾರ ಅವಕಾಶ ನೀಡಿದೆ.

ಮಾನವೀಯ ನೆಲೆಗಟ್ಟಿನಲ್ಲಿ ಕುಲಭೂಷಣ್​ ಜಾಧವ್​ ಪತ್ನಿಗೆ ತಮ್ಮ ಪತಿಯನ್ನು ಭೇಟಿ ಮಾಡಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಅಧಿಕೃತ ಆದೇಶ ಪ್ರತಿಯನ್ನು ಶೀಘ್ರ ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗುವುದು ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಶುಕ್ರವಾರ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕುಲಭೂಷಣ್​ ಜಾಧವ್​ ಅವರನ್ನು ಭೇಟಿ ಮಾಡಲು ಅವರ ಕುಟುಂಬಸ್ಥರಿಗೆ ಅವಕಾಶ ನೀಡಬೇಕು ಎಂದು ಹಲವು ತಿಂಗಳುಗಳಿಂದ ಪಾಕಿಸ್ತಾನಕ್ಕೆ ಭಾರತ ಮನವಿ ಸಲ್ಲಿಸುತ್ತಿತ್ತು. ವಿದೇಶಾಂಗ ಸಚಿವಾಲಯ ಪಾಕ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಹಲವು ಬಾರಿ ಪಾಕ್​ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೆ ಇತ್ತೀಚೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಮತ್ತು ಹೊಸದಾಗಿ ನೇಮಕವಾಗಿರುವ ಭಾರತದ ಪಾಕ್​ ರಾಯಭಾರಿ ಸೋಹೇಲ್​ ಮೊಹಮ್ಮದ್​ ಅವರು ಭೇಟಿಯ ಸಂದರ್ಭದಲ್ಲೂ ಸಹ ಕುಲಭೂಷಣ್​ ವಿಷಯ ಪ್ರಸ್ತಾಪವಾಗಿತ್ತು.

ಕುಲಭೂಷಣ್​ ಪ್ರಕರಣ ಅಂತಾಷ್ಟ್ರೀಯ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ಭಾರತ ಈ ಹಿಂದೆ ಕುಲಭೂಷಣ್​ ಭೇಟಿಗೆ ಕುಟುಂಬಕ್ಕೆ ಪಾಕ್​ ಅವಕಾಶ ನೀಡಿಲ್ಲ ಅಂತಾ ಅಂತಾರಾಷ್ಟ್ರೀಯ ಕೋರ್ಟ್​ಗೆ ದೂರು ಸಲ್ಲಿಸಿತ್ತು.