ವಿಕಲಚೇತನ ರಿಯಾಯಿತಿ ಬಸ್ ಪಾಸ್ ನವೀಕರಿಸಿಕೊಳ್ಳಲು ಸೂಚನೆ

ವಿಕಲಚೇತನ ರಿಯಾಯಿತಿ ಬಸ್ ಪಾಸ್ ನವೀಕರಿಸಿಕೊಳ್ಳಲು ಸೂಚನೆ

ವಿಜಯಪುರ,ಡಿ.30: ವಿಕಲಚೇತನರ ರಿಯಾಯಿತಿ ಬಸ್ ಪಾಸ್‍ಗಳನ್ನು ವಿಕಲಚೇತನ ಫಲಾನುಭವಿಗಳು ನವೀಕರಿಸಿಕೊಳ್ಳಲು ಆಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟು ಹಾಲಿ 2018ನೇ ಸಾಲಿನಲ್ಲಿ  ವಿತರಿಸಿರುವ ವಿಕಲಚೇತನ ಬಸ್ ಪಾಸ್‍ಗಳನ್ನು ದಿನಾಂಕ : 28-2-2018ರವರೆಗೆ ಆಯಾ ತಾಲೂಕಿನಲ್ಲಿ ರಿಯಾಯಿತಿ ಬಸ್ ಪಾಸ್‍ಗಳನ್ನು ನವೀಕರಿಸಿಕೊಳ್ಳುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಕ್ಕಳ ಸ್ವಯಂ ಸೇವಾ ಸಂಸ್ಥೆಗಳ ನೊಂದಣಿ ಕಡ್ಡಾಯ 
ವಿಜಯಪುರ: ಪಾಲನೆ ಪೋಷಣೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಲಯಗಳು, ಆಶ್ರಯಧಾಮಗಳು, ತೆರೆದ ತಂಗುದಾಣಗಳು, ನಿರ್ಗತಿಕ ಮಕ್ಕಳ ಕುಠೀರ, ಬಾಲ ಕಾರ್ಮಿಕರಿಗಾಗಿ ನಡೆಸುತ್ತಿರುವ ಬ್ರಿಡ್ಜ್ ಶಾಲೆಗಳು, ವಿಶೇಷ ದತ್ತು ಕೇಂದ್ರತಗಳು, ಉಜ್ವಲ ಕೇಂದ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದ ವಸತಿಯುತ ಸಂಸ್ಥೆಗಳು, ಅರ್ಹ ಸಂಸ್ಥೆಗಳು ಮಕ್ಕಳ ಪೋಷಣೆ ಮತ್ತು ರಕ್ಷಣೆ ನ್ಯಾಯ ಕಾಯ್ದೆಯನ್ವಯ ಡಿ.31ರೊಳಗಾಗಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ತಿಳಿಸಿದ್ದಾರೆ. 
ಸರ್ವೋಚ್ಛ ನ್ಯಾಯಾಲಯವು ಬಚ್‍ಪನ್ ಬಚಾವೋ ಆಂದೋಲನದ ಅಂಗವಾಗಿ ಸಲ್ಲಿಸಿದ ರಿಟ್ ಅರ್ಜಿಗೆ ನೀಡಿರುವ ನಿರ್ದೇಶನದಂತೆ ಈ ಸಂಸ್ಥೆಗಳು ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಮಕ್ಕಳನ್ನು ರಕ್ಷಣೆಗೆ ದಾಖಲು ಮಾಡಬೇಕೆ ವಿನ: ನೇರವಾಗಿ ಪಡೆಯಲು ಅರ್ಹರಿರುವುದಿಲ್ಲ. 
ಮಕ್ಕಳ ಸ್ವಯಂ ಸೇವಾ ಸಂಸ್ಥೆಗಳು ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಸೆಕ್ಷನ್ 42(1) ರನ್ವಯ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು. ಮುಂದುವರೆದು ನೊಂದಾಯಿಸಲು ತಡಮಾಡಿದ್ದಲ್ಲಿ ಪ್ರತಿ 30 ದಿನಕ್ಕೆ ಪ್ರತ್ಯೇಕ ಅಪರಾಧ ಎಂದು ಪರಿಗಣಿಸಲಾಗುವುದು. ಅಲ್ಲದೇ ಸಂಸ್ಥೆಯು ಯಾವುದೇ ಕಾಯ್ದೆಯಡಿ ನೋಂದಣಿಯಾಗಿದ್ದರೂ ಅದನ್ನು ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ. 
ಸರ್ಕಾರದ ವಿವಿಧ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಡಿಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಡೆಸಲಾಗುತ್ತಿರುವ ವಸತಿ ನಿಲಯ, ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ನೀಡಲು ಆಯಾ ಇಲಾಖೆಗಳು ತಮ್ಮ ಇಲಾಖೆಗಳ ಮಾನದಂಡಗಳನ್ನು ಅನುಸರಿಸುತ್ತಿರುವುದರಿಂದ ಸದರಿ ಸಂಸ್ಥೆಗಳನ್ನು ನೊಂದಾಯಿಸುವು ಅವಶ್ಯಕತೆ ಇರುವುದಿಲ್ಲ. ಪಾಲನೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಹಾಗೂ ಕಾನೂನು ಸಂಘರ್ಷಕ್ಕೊಳಪಟ್ಟ ಮಕ್ಕಳು ಇಂತಹ ಸಂಸ್ಥೆಗಳಲ್ಲಿ ಇದ್ದರೆ ಮಾತ್ರ ಬಾಲ ನ್ಯಾಯ ಕಾಯ್ದೆಯಡಿ ನೋಂದಣಿ ಮಾಡಬಹುದಾಗಿದೆ. 
ನೊಂದಣಿಯಾಗದ ಮಕ್ಕಳ ಪಾಲನಾ ಸಂಸ್ಥೆಗಳು ದಿನಾಂಕ : 31-12-2017ರೊಳಗಾಗಿ ನೋಂದಣಿ ಮಾಡಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮನೆ ನಂ.ಬಿ4/3, ವಿವೇಕ ನಗರ (ಪಶ್ಚಿಮ, ವಿಜಯಪುರ ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ. 

ಸೇವಾ ಸಿಂಧು ಅಂತರ್ಜಾಲಕ್ಕೆ 11 ಇಲಾಖೆಗಳ  165 ಸೇವೆ ಸಂಯೋಜನೆ
ವಿಜಯಪುರ: ರಾಷ್ಟ್ರೀಯ ಮಾಹಿತಿ ಕೇಂದ್ರವು ಇ-ಜಿಲ್ಲಾ ಯೋಜನೆಯಡಿ ಸೇವಾ ಸಿಂಧು ಅಂತರ್ಜಾಲ ತಾಣವನ್ನು ಅಭಿವೃದ್ದಿಪಡಿಸಿದ್ದು, ಇದರಲ್ಲಿ 31 ಇಲಾಖೆಗಳ 346 ನಾಗರಿಕ ಸೇವೆಗಳ ಪೈಕಿ 11 ವಿವಿಧ ಇಲಾಖೆಗಳ 165 ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲಕ್ಕೆ ಸಂಯೋಜಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ತಿಳಿಸಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಕಂದಾಯ ಇಲಾಖೆಯ ಸೇವೆಗಳನ್ನು ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ 180 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಂದಾಯ ಇಲಾಖೆಯ ನಾಗರಿಕ ಸೇವೆಗಳಾದ ಜಾತಿ ಪ್ರಮಾಣ ಪತ್ರ, ಆದಾಯ, ಓಬಿಸಿ ಪ್ರಮಾಣ ಪತ್ರ, ಭೂ ಹಿಡುವಳಿ ದೃಢೀಕರಣ ಪತ್ರ, ವಂಶವೃಕ್ಷ ಪತ್ರ ಹಾಗೂ ವ್ಯವಸಾಯಗಾರರ ಕುಟುಂಬ ಪ್ರಮಾಣ ಪತ್ರ, ಸೇರಿದಂತೆ 29 ಸೇವೆಗಳು ಲಭ್ಯವಿದ್ದು, ನಾಗರಿಕರು ತಮ್ಮ ಗ್ರಾಮದಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಹಾಗೂ ನಿಗದಿತ ಅವಧಿಯೊಳಗೆ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹಿಂದಿ ರಾಷ್ಟ್ರ ಭಾಷೆಯನ್ನು ಗೌರವಿಸಿ 
ವಿಜಯಪುರ: ಹಿಂದಿ ಭಾಷೆಯಲ್ಲಿ ಸಹಜತೆ ಇದೆ. ಇದು ಎಲ್ಲರನ್ನು ಪ್ರೀತಿಸುವ ಭಾಷೆಯಾಗಿದೆ. ನಾವು ಈ ರಾಷ್ಟ್ರ ಭಾಷೆಗೆ ಸದಾ ಗೌರವಿಸಬೇಕು ಎಂದು ದಕ್ಷಿಣ ಭಾರತ ಹಿಂದೀ ಪ್ರಚಾರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಆರ್.ಬಿ.ಹುಲ್ಲೊಳ್ಳಿಯವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ವತಿಯಿಂದ ಆಯೋಜಿಸಿದ ನಗರ ರಾಜಭಾಷಾ ಕಾರ್ಯಾಚರಣೆ ಸಮಿತಿ ವಾರ್ಷಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾತೆ, ಮಾತೃಭೂಮಿ ಹಾಗೂ ಮಾತೃಭಾಷೆಯನ್ನು ಎಂದೂ ಮರೆಯಬಾರದು ಎಂದು ಹೇಳಿದರು.
ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರ ಪ್ರಬಂಧಕ ವಿರೇಶ ಪಟ್ಟಣಶೆಟ್ಟಿ ಅವರು ಮಾತನಾಡಿ, ಕೇಂದ್ರ ಸರ್ಕಾರಿ ಕಾರ್ಯಾಲಯಗಳಲ್ಲಿ ಕೆಲಸ ಮಾಡುವವರು ಅನ್ಯ ರಾಜ್ಯಗಳಿಗೆ ವರ್ಗಾವಣೆಯಾದ ಸಂದರ್ಭದಲ್ಲಿ ಆಯಾ ರಾಜ್ಯಗಳ ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಹಿಂದು ಒಂದು ಸಂಪರ್ಕ ಭಾಷೆಯಾಗಿ ಕೆಲಸ ಮಾಡುತ್ತದೆ. ನಾವೆಲ್ಲರೂ ಮಾತೃ ಭಾಷೆಯನ್ನು ಪ್ರೀತಿಸುವ ಜೊತೆ ಹಿಂದಿ ಭಾಷೆಯನ್ನು ಕಲಿಯುವುದರ ಮೂಲಕ ಹಿಂದಿ ಭಾಷೆಗೆ ಗೌರವ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕಾರ್ಯಾಲಯಗಳ ಸಿಬ್ಬಂದಿ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕೇಂದ್ರೀಯ ವಿದ್ಯಾಲಯದ ಸಂತೋಷ ಹಲವಾಯಿ ನಿರೂಪಿಸಿದರು. ನಗರ ರಾಜಭಾಷಾ ಅಧಿಕಾರ ಸುಬ್ಬಾರಾವ್ ವಂದಿಸಿದರು.