ದಿ.15ರಂದು ಮುಚಖಂಡಿ ಶ್ರೀ ವೀರಭದ್ರೇಶ್ವರ ಅಗ್ಗಿ ಉತ್ಸವದ

ದಿ.15ರಂದು ಮುಚಖಂಡಿ ಶ್ರೀ ವೀರಭದ್ರೇಶ್ವರ ಅಗ್ಗಿ ಉತ್ಸವದ


     ಬಾಗಲಕೋಟೆ,ಆ.12: ನಗರಕ್ಕೆ ಹೊಂದಿಕೊಂಡಿರುವ ಮುಚಖಂಡಿಯ ವೀರಭದ್ರೇಶ್ವರ ದೇವರು ಭಕ್ತಕುಲಕೋಟಿ ಕಾಮಧೇನು-ಕಲ್ಪವೃಕ್ಷವಾಗಿದೆ. ಐತಿಹಾಸಿಕ ಇತಿಹಾಸ ಪರಂಪರೆಯನ್ನು ಹೊಂದಿರುವ ಮುಚಖಂಡಿಯಲ್ಲಿ ಪ್ರತಿವರ್ಷ ನಡೆಯುವ ಶ್ರಾವಣಮಾಸದ ಕೊನೆಯ ಮಂಗಳವಾರದಂದು ಜರುಗುವ ಜಾತ್ರಾ ಅಗ್ಗಿ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.
  ಹಳೆ ಬಾಗಲಕೋಟೆಯಿಂದ ಹಾಗೂ ನವನಗರದಿಂದ ಮುಚಖಂಡಿಗೆ ಬರಲು ಸುಂದರ ರಸ್ತೆಗಳನ್ನು ನಿರ್ಮಾಣ ಮಾಡುವ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. 
ಭಕ್ತರು ತಮ್ಮ ಬೇಡಿಕೆಗಳನ್ನು ಇಟ್ಟುಕೊಂಡು ಶ್ರೀ ವೀರಭದ್ರನ ಬಳಿ ಬಂದುನಡೆದುಕೊಂಡರೆ ಅದು ಈಡೇರಲಿದೆ ಎಂಬುದು  ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದು ಈಗಲೂ ಅದು ಈಡೇರುತ್ತಿದ್ದು ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಮಂಗಳವಾರ ಶ್ರೀ ವೀರಭದ್ರಶ್ವರ ಅಗ್ಗಿ ಉತ್ಸವ, ಚಿಕ್ಕ ರಥೋತ್ಸವ ನಡೆಯಲಿದೆ. 
    ಶ್ರಾವಣ ಮಾಸ ಬಂತು ಎಂದರೆ ಪ್ರತಿದಿನ ವೀರಭದ್ರೇಶ್ವರನ ದರ್ಶನ ಪಡೆಯಲು ಸಾಕಷ್ಟು ಭಕ್ತರು ಬರುತ್ತಾರೆ.ಶ್ರಾವಣ ಮಾಸದ ಮಂಗಳವಾರದಂದು ದೇವಸ್ಥಾನಕ್ಕೆ ಬರುವಭಕ್ತರು ನಸುಕಿನ ಜಾವ 4 ಗಂಟೆ ಸುಮಾರಿಗೆ ಬರುವಿಕೆ ಆರಂಭವಾಗುತ್ತದೆ.
ಮುಚಖಂಡಿ ಗ್ರಾಮದ ಸುತ್ತಮುತ್ತಲಿನ ಹಳೆ ಬಾಗಲಕೋಟೆ,ನವನಗರ,ವೀರಾಪುರ,ಹೊಸ ವೀರಾಪುರ,ಮುರನಾಳ,ಗದ್ದನಕೇರಿ,ಯಡಹಳ್ಳಿ,ಸೂಳಿಕೇರಿ,ನೀರಲಕೇರಿ,ಶಿಕ್ಕೇರಿ,ಬೇವಿನಮಟ್ಟಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳು ಹಾಗೂ ನಗರಗಳಿಂದ ಭಕ್ತರು ಶ್ರಾವಣ ಮಾಸದ ಪ್ರತಿ ಮಂಗಳವಾರು ಕಾಲ್ನಡಿಗೆಯಲ್ಲಿ ಆಗಮಿಸಿ ವೀರಭದ್ರನ ದರ್ಶನ ಪಡೆಯುವ ಮೂಲಕ ಪುನೀತರಾಗುತ್ತಾರೆ.
ಇದೇ ದಿನಾಂಕ 15ರಂದು ಮಂಗಳವಾರ ನಡೆಯುವ ಅಗ್ಗಿ ಉತ್ಸವದಲ್ಲಿ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ರುದ್ರಾಭಿಷೇಕ,ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತವೆ.ಅಷ್ಟೇ ಅಲ್ಲದೇ ವಿವಿಧ ಹೂವು,ಹಣ್ಣುಗಳಿಂದ  ವೀರಭದ್ರೇಶ್ವರನನ್ನು ಅಲಂಕರಿಸಲಾಗುತ್ತದೆ.
ನಂತರ ಸಂಜೆ 4 ಗಂಟೆಗೆ ದೇವಸ್ಥಾನದ ಆವರಣದಿಂದ ಜರುಗುವ ಚಿಕ್ಕ ರಥೋತ್ಸವ ಗ್ರಾಮದ ಅಗಸಿ ಬಾಗಿಲಿನವರೆಗೆ ಆಗಮಿಸಿ ನಂತರ ದೇವಸ್ಥಾನ ತಲುಪುತ್ತದೆ.ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಭಕ್ತರು ರಥಕ್ಕೆ ಹೂವು,ಬಾಳೆ ಹಣ್ಣು,ಚುರುಮುರಿ,ಉತ್ತತ್ತಿ ಹಾರಿಸಿ ಭಕ್ತಿಯನ್ನು ಸಮರ್ಪಿಸುತ್ತಾರೆ.
ದೇವಸ್ಥಾನಕ್ಕೆ ಮರಳಿ ರಥ ಬರುತ್ತಿದ್ದಂತೆ ಬಳಿಕ ದೇವಸ್ಥಾನದ ಆವರಣದಲ್ಲಿನ ಅಗ್ಗಿ ಕುಂಡದ ಸುತ್ತ ಸಹಸ್ರಾರು ಭಕ್ತರು ಜಮಾಯಿಸಿರುತ್ತಾರೆ.ಚಿಕ್ಕವರಿಂದ ಹಿಡಿದು ದೊಡ್ಡವರಾದಿಯಾಗಿ ಎಲ್ಲರು ಅಗ್ಗಿಕುಂಡದಲ್ಲಿ ಸಾಲಾಗಿ ಹಾಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ.
ಶ್ರಾವಣ ಮಾಸದಲ್ಲಿ ಬರುವ ಅಗ್ಗಿ ಉತ್ಸವದಂದು ಮುಚಖಂಡಿ ಗ್ರಾಮದಲ್ಲಿ ಹಬ್ಬದಂತೆ ಸಡಗರವೇ ಮನೆಮಾಡಿರುತ್ತದೆ.ಜಾತಿ ಮಥ,ಪಂಥ ಎನ್ನದೇ ಎಲ್ಲರೂ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರರಾಜ್ಯದಿಂದ ಬರುವ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸುತ್ತಾರೆ. ಮಧ್ಯಾಹ್ನವಾಗುತ್ತಿದ್ದಂತೆ ಗ್ರಾಮದಲ್ಲಿ ಲಕ್ಷಾಂತರ ಭಕ್ತ ಸಮೂಹವೇ ಸೇರಿಬಿಡುತ್ತದೆ. 
    ಪುರವಂತರು ರಥೋತ್ಸವಕ್ಕೂ ಮುನ್ನ ಶಸ್ತ್ರಗಳನ್ನು ತಮ್ಮ ದೇಹದಲ್ಲಿ ಹಾಕಿಕೊಳ್ಳುವ ಮೂಲಕ ಭಕ್ತಿಯನ್ನು ತೋರ್ಪಡಿಸುತ್ತಾರೆ.  ಅದರಂತೆ ದೇವರಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಭಕ್ತಿಯನ್ನು ಸಮಪರ್ಕಿಸಲು ಹಲವಾರು ಭಕ್ತರು ಜಾತ್ರೆಯ ವೇಳೆ ಪುರವಂತರೊಂದಿಗೆ ಶಸ್ತ್ರಗಳನ್ನು ತಮ್ಮ ದೇಹದಲ್ಲಿಹಾಕಿಸಿಕೊಳ್ಳುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವುದು ರೂಡಿಯಲ್ಲಿದೆ.
    ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಕ್ಕ ಬ್ರಿಟಿಷರು ನಿರ್ಮಿಸಿರುವ ಆಣೆಕಟ್ಟನ್ನು ನೋಡಲು ಹಲವಾರು ಭಾಗದಿಂದ ಜನರು ಆಗಮಿಸುತ್ತಾರೆ. ಈಗ ಇನ್ನೇನು ಕೆಲವೇ ದಿನಗಳಲ್ಲಿ ಬಾಗಲಕೋಟೆಯ ಸಮೀಪ ವ್ಯಾಪಿಸಿರುವ ಆಲಮಟ್ಟಿ ಹಿನ್ನೀರನ್ನು ಮುಚಖಂಡಿ ಕೆರೆಗೆ ತುಂಬಿಸುವ ಎಲ್ಲ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ.
    ಪ್ರತಿವರ್ಷ ಮುಚಖಂಡಿ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ನಡೆಯುವ ಅಗ್ಗಿ ಉತ್ಸವದಲ್ಲಿ ಯಾವುದೇ ತೊಡಕಾಗದಂತೆ ಅಚ್ಚುಕಟ್ಟಾಗಿ ಮುಚಖಂಡಿ ಶ್ರೀ ವೀರಭದ್ರೇಶ್ವರ ಜೀರ್ಣೋದ್ಧಾರ ಕಮೀಟಿಯ ಅಧ್ಯಕ್ಷರು,ಸರ್ವಸದಸ್ಯರು,ಪದಾಧಿಕಾರಿಗಳು  ಹಾಗೂ ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. 
ಅಗ್ಗಿ ಉತ್ಸವ : ದಿ.15ರಂದು ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ,ಚರಂತಿಮಠದ ಪ್ರಭುಸ್ವಾಮೀಜಿಯವರ ನೇತೃತ್ವದಲ್ಲಿ ಸಂಜೆ 5 ಗಂಟೆಗೆ ಅಗ್ಗಿ ಉತ್ಸವ ಜರುಗಲಿದೆ.