ಸಚಿವ ಡಿ.ಕೆ.ಶಿವಕುಮಾರ್ ಅವರು ನನಗೆ ಸಹೋದರನ ಸಮಾನ

ಸಚಿವ ಡಿ.ಕೆ.ಶಿವಕುಮಾರ್ ಅವರು ನನಗೆ ಸಹೋದರನ ಸಮಾನ
ರಾಮನಗರ,ನ.28: ಸಚಿವ ಡಿ.ಕೆ.ಶಿವಕುಮಾರ್ ಅವರು ನನಗೆ ಸಹೋದರನ ಸಮಾನ. ಅವರು ಎಲ್ಲಿಯೇ ಸಿಕ್ಕಿದರೂ ಕುಶಲೋಪರಿ ವಿಚಾರಿಸುವುದು ಸರ್ವೇ ಸಾಮಾನ್ಯ. ಈ ಹಿಂದೆಯೂ ನಾವು ಹಲವಾರು ಬಾರಿ ಭೇಟಿ ಮಾಡಿದ್ದೇವೆ. ಮಾತನಾಡಿದ್ದನ್ನೇ ನೆಪವಾಗಿಟ್ಟುಕೊಂಡು ಚನ್ನಪಟ್ಟಣದಲ್ಲಿ ಮ್ಯಾಚ್ ಫಿಕ್ಸಿಂಗ್ ರಾಜಕಾರಣ ನಡೆಯುತ್ತಿದೆ ಎಂದು ವದಂತಿ ಸೃಷ್ಟಿಸುವುದು ಸರಿಯಲ್ಲ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣದಲ್ಲಿ ನಡೆದ ಕನಕನ ಹಬ್ಬ ಕಾರ್ಯಕ್ರಮದಲ್ಲಿ ನಮ್ಮಿಬ್ಬರ ಭೇಟಿ ಕೇವಲ ಆಕಸ್ಮಿಕ. ಈ ವೇಳೆ ಸಹಜವಾಗಿಯೇ ಕುಶಲೋಪರಿ ವಿನಿಮಯ ಮಾಡಿಕೊಂದದಿವೆಯೇ ಹೊರತು ಯಾವುದೇ ರಾಜಕೀಯ ಮಾತುಕತೆ ನಡೆಸಿಲ್ಲ. ಒಂದೇ ವೇದಿಕೆ ಹಂಚಿಕೊಂಡು, ಕುಶಲೋಪರಿ ವಿನಿಮಯ ಮಾಡಿಕೊಂಡಿದ್ದನ್ನೇ ಮಾಧ್ಯಮಗಳು ರಾಜಕೀಯ ಬಣ್ಣ ಕಟ್ಟುತ್ತಿವೆ ಎಂದು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.