ಕನ್ನಡ ಭಾಷೆಯಲ್ಲಿ ಪಠ್ಯಕ್ರಮ ಮಾಡದೇ ಹೋದಲ್ಲಿ ಕನ್ನಡ ಭಾಷೆ ಉದ್ದಾರವಾಗುವುದಿಲ್ಲ : ಡಾ.ಚಂದ್ರಶೇಖರ ಕಂಬಾರ

ಕನ್ನಡ ಭಾಷೆಯಲ್ಲಿ ಪಠ್ಯಕ್ರಮ ಮಾಡದೇ ಹೋದಲ್ಲಿ ಕನ್ನಡ ಭಾಷೆ ಉದ್ದಾರವಾಗುವುದಿಲ್ಲ : ಡಾ.ಚಂದ್ರಶೇಖರ ಕಂಬಾರ

ಬೆಂಗಳೂರು ನ,01: ಸ್ವಪ್ನ ಬುಕ್ ಹೌಸ್ ಆಶ್ರಯದಲ್ಲಿ ಇಂದು ಗಾಂಧೀಭವನದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸ್ವಪ್ನ ಸುವರ್ಣ ಸಂಭ್ರಮದ ಆಚರಣೆಯ ಅಂಗವಾಗಿ ಕನ್ನಡದ 50 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪುಸ್ತಕಗಳ ಸಂಭ್ರಮವು ಎಂದಿಗೂ ಜೀವಂತ. ಸಾಹಿತ್ಯಗಳು ಬದುಕಿರುವುದರಿಂದಲೇ ನಮ್ಮ ಹಿಂದಿನ ಸತ್ಯಾಸತ್ಯತೆಯನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಕನ್ನಡಕ್ಕೆ ಅಪಾಯ ಬಂದಿರುವುದು ಆತಂಕದ ಸಂಗತಿ. ನಾವು ಜಾಗೃತರಾಗಬೇಕು. ಕನ್ನಡ ಕಾಪಾಡಬೇಕು, 1ನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗೆ ಕನ್ನಡ ಭಾಷೆಯಲ್ಲಿ ಪಠ್ಯಕ್ರಮ ಮಾಡದೇ ಹೋದಲ್ಲಿ ಕನ್ನಡ ಭಾಷೆ ಉದ್ದಾರವಾಗುವುದಿಲ್ಲ. ಹಾಗಾಗಿ ಕನ್ನಡವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು. ಕನ್ನಡವು ಇತ್ತೀಚಿನ ದಿನಗಳಲ್ಲಿ ತನ್ನ ಆಸ್ತಿತ್ವವನ್ನು ಕಳೆದುಕೊಳ್ಳಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರುತರಾದ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ವಿರೇಶಾನಂದ ಸರಸ್ವತಿ ಸ್ವಾಮೀಜಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಮರಳಸಿದ್ದಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸ್ವಪ್ನ ಬುಕ್ ಹೌಸ್ ಅಧ್ಯಕ್ಷ ಸುರೇಶ್ ಷಾ, ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್, ಸ್ವಪ್ನ ಬುಕ್ ಹೌಸ್ನ ಕನ್ನಡ ವಿಭಾಗದ ದೊಡ್ಡೇಗೌಡ ಇನ್ನಿತರರು ಉಪಸ್ಥಿತರಿದ್ದರು.