ಸರ್ಕಾರ 3ನೇ ಹಂತದ ಯೋಜನೆಗೆ ನ್ಯಾಯ ಒದಗಿಸಿದೆ : ಪಾಟೀಲ

ಸರ್ಕಾರ 3ನೇ ಹಂತದ ಯೋಜನೆಗೆ ನ್ಯಾಯ ಒದಗಿಸಿದೆ : ಪಾಟೀಲ

ವಿಜಯಪುರ,ಅ.14: ಯ.ಕೆ.ಪಿ 3ನೇ ಹಂತ ಪೂರ್ಣಗೊಳಿಸಲು ಪುನರವಸತಿ ಮತ್ತು ಪುನರ ನಿರ್ಮಾಣ ಸೇರಿದಂತೆ ಹಿಂದೆ ಅನುಮೋದನೆಗೊಂಡಿದ್ದ 17 ಸಾವಿರ ಕೋಟಿ ಅನುದಾನ ಬದಲಾಗಿ ಇಂದು 51,800 ಕೋಟಿ ರೂಪಾಯಿ ಪರಿಷ್ಕತ ಯೋಜನೆಯ ಅನುದಾನಕ್ಕೆ ಮಂಜೂರಾತಿ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಯುಕೆಪಿ 3ನೇ ಹಂತ ಯೋಜನೆಗೆ ನ್ಯಾಯ ದೊರಕಿಸಿದ್ದು, ಇದು ನೀರಾವರಿ ಕ್ಷೇತ್ರದಲ್ಲಿಯೇ ಐತಿಹಾಸಿಕ ನಿರ್ಣಯ ಎಂದು ಜಲಸಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು. 
ತಮ್ಮ ಸ್ವಕ್ಷೇತ್ರ ಬಬಲೇಶ್ವರದಲ್ಲಿ ಇಂದು ಕೃಷ್ಣಾ ಭಾಗ್ಯ ಜಲ ನಿಗಮ ಮುಳವಾಡ ಏತ ನೀರಾವರಿ ಯೋಜನೆ ವಿಭಾಗೀಯ ಕಛೇರಿಯ ರೂ.1.12 ಕೋಟಿ ವೆಚ್ಚದ ನೂತನ ಕಟ್ಟಡ ಶಂಕುಸ್ಥಾಪನೆ ಹಾಗೂ ಬಬಲೇಶ್ವರ ಮುಖ್ಯರಸ್ತೆಯನ್ನು ಜೋಡು ಮಾರ್ಗವಾಗಿ ರೂ.2.60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಾಲನೆ ನೀಡಿ ಮಾತನಾಡಿದ ಅವರು 51 ಸಾವಿರ ಕೋಟಿ ಅಂದರೆ ರಾಜ್ಯದ ಅರ್ಧ ಬಜೆಟನಷ್ಟು ವೆಚ್ಚ ಆಗುತ್ತದೆ. ಹಿಂದೆ ಯಾವುದೇ ಸರ್ಕಾರ, ಮುಖ್ಯಮಂತ್ರಿ, ನೀರಾವರಿ ಸಚಿವ ಇಷ್ಟೊಂದು ಹಣವನ್ನು ಈ ಭಾಗಕ್ಕೆ ನೀರಾವರಿಗೆ ನೀಡಿಲ್ಲ ಎನ್ನುವುದನ್ನು ನೀರಾವರಿ ವೈಫಲ್ಯ ಎಂದು ಸಮಾವೇಶ ಮಾಡುತ್ತಿರುವ ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಪಾಟೀಲ ಹೇಳಿದರು.
ಬಿಜೆಪಿಯಲ್ಲಿ ಕಳಪೆ ಜನ ಸೇರ್ಪಡೆಯಾಗಿರವ ಕಾರಣ ಆ ಪಕ್ಷ ಕಳಪೆ ಮಟ್ಟದಿಂದ ಹೋರಾಟ ಮಾಡುತ್ತಿದೆ. ನನ್ನ ಕಾರ್ಯಗಳಿಂದಾಗಿ ರೈತರು ನನಗೆ ಸರ್ಟಿಫಿಕೆಟ್ ಈಗಾಗಲೇ ಕೊಟ್ಟಿದ್ದಾರೆ. ನನ್ನ ಕೆಲಸಗಳನ್ನು ಮೆಚ್ಚಿದ್ದಾರೆ. ಅವರ ಭೂಮಿಗೆ ನೀರು ಹರಿಸಿದ್ದೇನೆ. ಇನ್ನೂ ಹರಿಸಲಾಗುತ್ತಿದೆ. ಹಗಲು-ರಾತ್ರಿ ಕೆಲಸ ಮಾಡಲಾಗುತ್ತಿದೆ. ಶೇ.99 ರೈತರು ನೀರಾವರಿ ಯೋಜನೆಗಳಿಗಾಗಿ ತಮ್ಮ ಜಮೀನು ತ್ಯಾಗ ಮಾಡಿದ್ದಾರೆ. ಈಗಾಗಲೇ ಪರಿಹಾರ ತೆಗೆದುಕೊಂಡವರಿಗೂ ಮುಂದೆ ನಿಗದಿಯಾಗುವ ಹೆಚ್ಚುವರಿ ಪರಿಹಾರ ಧನವನ್ನು ಆ ರೈತರಿಗೆ ನೀಡಲಾಗುವುದು. ಸಂತ್ರಸ್ತರಾಗುವವರೆ ಹೆಚ್ಚಿನ ನ್ಯಾಯ ದೊರಕಿಸಲು ನಮ್ಮ ಸರ್ಕಾರ ಕಂದಾಯಮಂತ್ರಿ ಕಾಗೋಡ ತಿಮ್ಮಪ್ಪನವರ ನೇತೃತ್ವದಲ್ಲಿ 5 ಪ್ರಮುಖ ಸಚಿವರ ಸಮಿತಿ ರಚನೆ ಮಾಡಿದ್ದು, ಶೀಘ್ರದಲ್ಲಿಯೇ ವರದಿಯನ್ನು ಪಡೆಯಲಿದ್ದೆವೆ ಎಂದರು.
ಬಬಲೇಶ್ವರ ಗ್ರಾಮಕ್ಕೆ ನೂತನ ತಾಲೂಕ ಕೇಂದ್ರ, ನೂತನ ಬಸ್ ಸ್ಟ್ಯಾಂಡ್, ಐ.ಟಿ.ಐ ಕಟ್ಟಡ, ಎಲ್ಲ ಸಮಾಜಗಳಿಗೆ ಸಮುದಾಯ ಭವನ, ರಸ್ತೆ, ಸುರ್ವಣಗ್ರಾಮ ಸೇರಿದಂತೆ ಎಲ್ಲಾ ಅಭಿವೃದ್ದಿ ಕೆಲಸ ಮಾಡಿದ್ದು, ಈ ಬಾರಿ ಹೆಚ್ಚಿನ ಬಹುಮತದಿಂದ ಆಶೀರ್ವದಿಸಬೇಕೆಂದು ವಿನಂತಿಸಿದರು.
ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಜಿ.ಪಂ.ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಪಾಟೀಲ, ಜಿ.ಪಂ.ಸದಸ್ಯ ಉಮೇಶ ಕೋಳಕೂರ, ಭೀಮಶಿ ಬಿರಾದಾರ, ಬಾಪುರಾಯ ಜಂಗಮಶೆಟ್ಟಿ, ಕೆ.ಜಿ.ದೇಸಾಯಿ, ಮಹೇಶ ಮಾಳಿ, ಸಂಗಮೇಶ ಬಬಲೇಶ್ವರ, ದೇವಾನಂದ ಅಲಗೊಂಡ, ಪ್ರಕಾಶ ಪಾಟೀಲ, ಧರ್ಮಣ್ಣ ಬೀಳೂರ, ಕಾರಜೊಳ ಗ್ರಾ.ಪಂ.ಅಧ್ಯಕ್ಷ ಮಲಘಾಣ ಮತ್ತಿತರರು ಉಪಸ್ಥಿತರಿದ್ದರು.