ಬೆಳಗಾವಿ ಅಧಿವೇಶನದ ವೇಳೆ ಉಪವಾಸ ಸತ್ಯಾಗ್ರಹ : ವಸಂತ ಕವಿತಾ ರೆಡ್ಡಿ

ಬೆಳಗಾವಿ ಅಧಿವೇಶನದ ವೇಳೆ ಉಪವಾಸ ಸತ್ಯಾಗ್ರಹ : ವಸಂತ ಕವಿತಾ ರೆಡ್ಡಿ

ಬಾಗಲಕೋಟೆ, ನ. 7:   ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸದಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೆಡ್ಡಿ ಅವರ ಮೊಮ್ಮಗಳು ವಸಂತ ಕವಿತಾ ರೆಡ್ಡಿ ಇಲ್ಲಿ ತಿಳಿಸಿದರು.
‘ರೆಡ್ಡಿ ಅವರ ಸೇವೆಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ವಿಧಾನಸೌಧದ ವಜ್ರಮಹೋತ್ಸವದ ಆಚರಣೆ ವೇಳೆಯೂ ಅವರ ಸೇವೆ ಸ್ಮರಿಸುವ ಕಾರ್ಯ ನಡೆಯಲಿಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
‘ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ರೆಡ್ಡಿ, ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿದ್ದಾರೆ. ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಗಾಂಧಿವಾದಿಯಾಗಿದ್ದ ಅವರ ವಿಚಾರಗಳನ್ನು ಯುವ ಪೀಳಿಗೆಗೆ ತಲುಪಿಸಲು ಸರ್ಕಾರ ಮುಂದಾಗಬೇಕು. ಪುತ್ಥಳಿ ನಿರ್ಮಾಣ ಮಾಡುವುದರ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಬೇಕು’ ಎಂದು ಅವರು ಒತ್ತಾಯಿಸಿದರು.