ರೈತರಲ್ಲಿ ವೈಜ್ಞಾನಿಕ ದೃಷ್ಠಿಕೋನ ಅವಶ್ಯ : ಸಚಿವೆ ಉಮಾಶ್ರೀ

ರೈತರಲ್ಲಿ ವೈಜ್ಞಾನಿಕ ದೃಷ್ಠಿಕೋನ ಅವಶ್ಯ : ಸಚಿವೆ ಉಮಾಶ್ರೀ

ಬಾಗಲಕೋಟೆ: ಸೆಪ್ಟೆಂಬರ, 28: ರೈತರಲ್ಲಿ ವೈಜ್ಞಾನಿಕ ದೃಷ್ಠಿಕೋನ ಇರುವದರ ಜೊತೆಗೆ ಬದಲಾವಣೆಗೆ ತಕ್ಕಂತೆ ಯಾವ ರೀತಿ ಫಸಲನ್ನು ಪಡೆಯಬೇಕೆಂಬ ಅರಿವು ಅಗತ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಹೇಳಿದರು.
    ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತೋಟಗಾರಿಕೆ ಹಾಗೂ ತೋವಿವಿಯ ಸಹಯೋಗದಲ್ಲಿ ಹಮ್ಮಿಕೊಂಡ ಮಾವು ಸವರುವಿಕೆ ಪುನಃಶ್ಚೇತನ ಮತ್ತು ಮಾರುಕಟ್ಟೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಕಾಲದಿಂದ ಬಂದ ಪದ್ದತಿಯನ್ನು ಬಳಸದೇ ಸುಧಾರಿತ ಸಧಾರಿತ ಬೇಸಾಯ ಕ್ರಮ ಅನುಸರಿಸಿ ಗುಣಮಟ್ಟದ ಫಸಲನ್ನು ಪಡೆದು ಆರ್ಥಿಕವಾಗಿ ಮುಂದೆ ಬರಬೇಕೆಂದರು.
    ಬಹು ವಾರ್ಷಿಕ ಬೆಳೆ ಹಾಗೂ ಹಣ್ಣುಗಳ ರಾಜನಾದ ಮಾವಿನ ಹಣ್ಣಿನಲ್ಲಿ ರೋಗ ನಿಯಂತ್ರಕ ಶಕ್ತಿ ಹೆಚ್ಚಿಗಿದ್ದು, ವರ್ಷದಲ್ಲಿ ಮೂರು ತಿಂಗಳುಗಳ ಕಾಲ ಸಿಗುವ ಹಣ್ಣು ಇದಾಗಿದೆ. ಮಾವು ಬೆಳೆಯಲ್ಲಿ ಪ್ರಪಂಚದಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 727 ರಷ್ಟು ಹೆಕ್ಟೇರನಲ್ಲಿ ಮಾವಿನ ಹಣ್ಣನ್ನು ಬಳೆಯಲಾಗುತ್ತಿದ್ದು, ಒಟ್ಟು 30.87 ಮೆಟ್ರಿಕ್ ಟನ್ ರಷ್ಟು ಉತ್ಪಾದನೆಯಾಗುತ್ತಿದೆ ಎಂದರು. ಮಾವುಗಳನ್ನು ಬೆಳೆಯುವದರ ಜೊತೆಗೆ ಅನೇಕ ಸವಾಲುಗಳನ್ನು ರೈತ ಎದುರಿಸುತ್ತಿದ್ದು, ಗುಣಮಟ್ಟದ, ಉತ್ತಮ ಸಮಗ್ರ ಪೌಷ್ಠಿಕಾಂಶವುಳ್ಳ ಬೆಳೆಯನ್ನು ಬೆಳೆಯಲು ವೈಜ್ಞಾನಿಕ ದೃಷ್ಠಿಕೋನ ಅಗತ್ಯವಾಗುತ್ತದೆ ಎಂದರು.
    ಈ ಕಾರ್ಯಾಗಾರದಲ್ಲಿ ಸುಮ್ಮನೇ ಕೇಳಿ ಹೋಗುವದಲ್ಲ. ಅನುಕರಣೆ ಮಾಡಬೇಕು. ಸವಾಲುಗಳ ಮಧ್ಯೆ ಇದ್ದು ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿ ಬೆಳೆಯಲು ಮುಂದಾಗಬೇಕು. ಅಂದಾಗ ಮಾತ್ರ ಗುಣಮಟ್ಟದ ಫಸಲನ್ನು ಪಡೆಯಲು ಸಾದ್ಯವಾಗುತ್ತದೆ ಎಂದರು. ಮನುಷ್ಯ ಕುಲದಲ್ಲಿ ಮಾಡುವ ಬದಲಾವಣೆಗಳು ಸಸ್ಯಕುಲದಲ್ಲಿ ಮಾಡಬೇಕು. ಅನುಪಯುಕ್ತಗೊಂಡ ಮಾವಿನ ಗಿಡಗಳಿಗೆ ಸವರುವಿಕೆ ಪುನಃಶ್ಚೇತನ ಕ್ರಮಗಳ ತಿಳಿದುಕೊಂಡು ಉತ್ತಮ ಬೆಳೆ ಬೆಳೆಯುವಂತೆ ಉಮಾಶ್ರೀ ತಿಳಿಸಿದರು. 
    ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಕೇವಲ ಮಳೆಯನ್ನೇ ಅನುಸರಿಸಿ ಒಣ ಬೇಸಾಯ ಮಾಡುವದರ ಜೊತೆಗೆ ತೋಟಗಾರಿಕೆ ಬೆಳೆಗಳತ್ತ ದೃಷ್ಠಿ ಹರಿಸಬೇಕೆಂದರು. ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿರುವ ಬಗ್ಗೆ ಆತಂಕ ಪಡದೇ ಈ ಕಾರ್ಯಾಗಾರದ ಮೂಲಕ ಸುಧಾರಿತ ಪದ್ದತಿಗಳ ಬಗ್ಗೆ ತಿಳಿದುಕೊಂಡು ಗುಣಮಟ್ಟದ ಮಾವಿನ ಫಸಲನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು. ಮಾವನ್ನು ನೈಸರ್ಗಿಕವಾಗಿ ಹಣ್ಣಾಗುವಂತೆ ಮಾಡಬೇಕು. ಕೆಮಿಕಲ್ ಬಳಸಿ ಹಣ್ಣಾಗಿಸಬೇಡಿ. ಇದರಿಂದ ಅನೋಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು.
    ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಮಾತನಾಡಿ, ಮಾವು ಒಂದು ಅಧಿಕ ಪೌಷ್ಠಿಕಾಂಶವುಳ್ಳ ಬೆಳೆಯಾಗಿದ್ದು, ಮಾವಿನಲ್ಲಿ ಅಧಿಕ ಇಳುವಳಿ ಹಾಗೂ ಗುಣಮಟ್ಟದ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯಿಂದ ಚಾಮರಾಜನಗರದ ವರೆಗೆ ಪ್ರವಾಸ ಕೈಗೊಳ್ಳಲಾಗಿದ್ದು, ರೈತರಲ್ಲಿ ಮಾವಿನ ಇಳುವರಿ ಹೆಚ್ಚಿಸುವ ಸಲುವಾಗಿ ಅರಿವು ಮೂಡಿಸಲು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ 2 ಲಕ್ಷ ಹೆಕ್ಟೆರ್ ಮಾವು ಬೆಳೆಯಲಾಗುತ್ತಿದ್ದು, ಅದರಲ್ಲಿ ಶೇ.40 ರಷ್ಟು ಅನುತ್ಪಾದಕ ಬೆಳೆಯನ್ನು ಒಟ್ಟುಕೊಂಡಿದ್ದೇವೆ. 20 ರಿಂದ 30 ವರ್ಷದ ಹಳೆಯದಾದ ಮಾವಿಕ ಗಿಡಗಳಿದ್ದು, ಅವುಗಳನ್ನು ಪುನಃಶ್ಚೇತನ ಗೊಳಿಸುವ ಅಗತ್ಯವಿದ್ದು, ಅಧಿಕ ಇಳುವಳಿ ಪಡೆಯಲು ಸವರುವಿಕೆ ವಿಧಾನ ಅಗತ್ಯವಾಗಿದೆ ಎಂದರು.
    ಇದೇ ಸಂದರ್ಭದಲ್ಲಿ ಮಾವಿನ ಇಳುವರಿ ಕುರಿತ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಉಪಾದ್ಯಕ್ಷ ಪಿ.ರಾಜಕುಮಾರ, ನಿರ್ದೇಶಕರಾದ ಜಿ.ಎಸ್.ಗೌಡರ, ಮೊಹಮ್ಮದ ಇಸ್ಮಾಯಿಲ್, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ಸದಸ್ಯ ಮಹಾಂತೇಶ ಉದಪುಡಿ, ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ತೋವಿವಿಯ ವಿಸ್ತರಣಾ ನಿರ್ದೇಶಕ ವಾಯ್.ಟಿ.ಕೋಟಿಕಲ್, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.