ಡಾ: ಬಿ.ಆರ್. ಅಂಬೇಡ್ಕರ್‍ಗೆ ಸಚಿವ ಎಂ.ಬಿ.ಪಾಟೀಲ ಅವರಿಂದ ಗೌರವ ನಮನ

ಡಾ: ಬಿ.ಆರ್. ಅಂಬೇಡ್ಕರ್‍ಗೆ ಸಚಿವ ಎಂ.ಬಿ.ಪಾಟೀಲ ಅವರಿಂದ ಗೌರವ ನಮನ

ವಿಜಯಪುರ,ಡಿ.6: ಭಾರತದ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ 61 ನೇ ಪರಿನಿರ್ವಾಣ ದಿನದ ಅಂಗವಾಗಿ ಬೆಳಿಗ್ಗೆ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ನಗರದ ಡಾ: ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. 
ಈ ಸಂದರ್ಭಧಲ್ಲಿ ಸಚಿವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ, ಸಮತೆ, ಸಹೋದರತ್ವ ಹಾಗೂ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ಅಳವಡಿಸಿದರು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ಚಿರಸ್ಮರಣೀಯರಾಗಿದ್ದಾರೆ. 
ಡಾ.ಬಿ.ಆರ್.ಅಂಬೇಡ್ಕರ್ ಅವರ ಗೌರವಾರ್ಥವಾಗಿ ನಗರದ ಮಧ್ಯಭಾಗದಲ್ಲಿರುವ ಈ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ನವೀಕರಣಗೊಳಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಒಂದು ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುವುದು. ಅದರಂತೆ ಡಾ.ಬಿ.ಆರ್.ಅಂಬೇಡ್ಕರ್ ಭವನದ ಪುನರ್ ನವೀಕರಣಕ್ಕೂ 2 ಕೋಟಿ ರೂ.ಗಳ ಅನುದಾನವನ್ನು ಕಾಯ್ದಿರಿಸಲಾಗುವುದೆಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಆಝಾದ ಪಟೇಲ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಉಪವಿಭಾಗಾಧಿಕಾರಿ ಶಂಕರ ವಣಕ್ಯಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜಿ.ಎಂ.ದೊಡಮನಿ, ಸಮಾಜದ ಮುಖಂಡರಾದ ಅಡಿವೆಪ್ಪ ಸಾಲಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.