ಸ್ವ ಇಚ್ಛೆಯಿಂದ ರಕ್ತದಾನ ಮಾಡಿ:ಜಿ.ಪಂ. ಅಧ್ಯಕ್ಷೆ ನೀಲಮ್ಮ ಮೇಟಿ

ಸ್ವ ಇಚ್ಛೆಯಿಂದ ರಕ್ತದಾನ ಮಾಡಿ:ಜಿ.ಪಂ. ಅಧ್ಯಕ್ಷೆ ನೀಲಮ್ಮ ಮೇಟಿ

ವಿಜಯಪುರಜೂ.15: ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದರಿಂದ ಹಲವಾರು ಜನರು ಸಾವಿನಿಂದ ಪಾರಾಗುತ್ತಾರೆ. ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವ-ಇಚ್ಛೆಯಿಂದ ಯಾವುದೇ ಬೇಡಿಕೆಗಳಿಲ್ಲದೆ ರಕ್ತದಾನ ಮಾಡಿದರೆ ಸಾರ್ಥಕವಾಗುವುದೆಂದು ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ  ಶ್ರೀಮತಿ ನೀಲಮ್ಮ ಮೇಟಿ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆ ಮತ್ತು ಸ್ವಯಂ ಸೇವಾ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಆಯೋಜಿಸಿದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ರಕ್ತಕ್ಕೆ ವರ್ಷವಿಡಿ ಬೇಡಿಕೆ ಇದ್ದರು ಕೂಡಾ, ಅಪಘಾತಗಳು ಹೆರಿಗೆ ಸಂದರ್ಭದಲ್ಲಿ ಮತ್ತು ಆಪರೇಶನ ಮಾಡುವ ವೇಳೆಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಇದರ ಜೊತೆಗೆ ಕ್ಯಾನ್ಸರ ರೋಗಿಗಳು ಮತ್ತು ಇನ್ನಿತರ ಕಾಯಿಲೆಗಳು ಸಂಬವಿಸಿದಲ್ಲಿ ರೋಗಿಗಳು ರಕ್ತದಾನಿಗಳನ್ನೆ ಅವಲಂಭಿಸಿರುತ್ತಾರೆ. ರಕ್ತದಾನ ಮಾಡಬೇಕಾದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಳ್ಳೆಯ ಆಹಾರ, ತರಕಾರಿ, ಇನ್ನಿತರ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರ ಮೂಲಕ ರಕ್ತವನ್ನು ವೃದ್ಧಿ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿ ಇನ್ನೊಬ್ಬರ ಜೀವ ಉಳಿಸುವದರಲ್ಲಿ ಹೆಮ್ಮೆ ನಿಮ್ಮದಾಗುತ್ತದೆ ಎಂದು ಹೇಳಿದರು. 

ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ಚನ್ನಮ್ಮ ಕಟ್ಟಿ ರಕ್ತದಾನದ ಮಹತ್ವ ಮತ್ತು ಯಾರು ರಕ್ತದಾನ ಮಾಡಬೇಕು, ಯಾರು ಯಾವ ರಕ್ತವನ್ನು ಪಡೆಯಬೇಕು ಎಂಬುವುದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. 

ಸ್ವಯಂ ಸೇವಾ ಸಂಘಗಳ ಅಧ್ಯಕ್ಷರಾದ ಪೀಟರ್ ಅಲೆಕ್ಸಾಂಡರ್ ರವರು ಮಾತನಾಡಿ,“ರಕ್ತವು ಕೃತಕವಾಗಿ ಸೃಷ್ಠಿಸಲು ಸಾಧ್ಯವಿಲ್ಲ ರಕ್ತ ದೇಹದ ಜೀವನಾಡಿ” ಆದ್ದರಿಂದ ಇಂದೇ ರಕ್ತದಾನ ಮಾಡಿ ! ಇನ್ನೊಂದು ಜೀವಕ್ಕೆ ವರದಾನ ನೀಡಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಮು ಸೋಮು ರಾಠೋಡ ಅವರು ಮಾತನಾಡಿ, ರಕ್ತದಾನ ಮಾಡುವುದರಿಂದ ಪುನಃ ರಕ್ತವು ದೇಹದಲ್ಲಿ ಸಂಗ್ರಹವಾಗುತ್ತದೆ ದೇಶದಲ್ಲಿ ರಕ್ತದ ಕೊರತೆ ಬಹಳಷ್ಟು ಇರುವುದರಿಂದ ಜನರು ಸಾವಿಗಿಡಾಗುತ್ತಿದ್ದಾರೆ ಆದ್ದರಿಂದ ಯುವ ಜನಾಂಗ ಇದನ್ನು ಅರಿತುಕೊಂಡು ಸ್ವಯಂ ಪ್ರೇರಣೆಯಿಂದ ಪ್ರಜ್ಞಾವಂತರಾಗಿ ರಕ್ತದಾನ ಮಾಡಿ ಜಾಗೃತಿ ಮೂಡಿಸಲು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚುಬಾರಿ ರಕ್ತದಾನ ಮಾಡಿದಂತ ಮಹನಿಯರಾದ ಅಶೋಕ ಗೋಕಾಕ, ಲಾಲ್‍ಸಾಬ ಬಾಗಲಕೋಟ, ಬಸವರಾಜ ಜಾಲಗೇರಿ, ಕು. ಜ್ಯೋತಿ ಜಾಲವಾಧಿ, ಸಚಿನ ಪತ್ತಾರ, ಸುರೇಶ ಮೋಹಿತೆ ಹಾಗೂ ಜಿಲ್ಲೆಯಲ್ಲಿ ಹೆಚ್ಚು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಅತೀ ಹೆಚ್ಚು ರಕ್ತವನ್ನು ಸಂಗ್ರಹ ಮಾಡಿಕೊಟ್ಟ  ಸಂಘ ಸಂಸ್ಥೆಗಳಾದ ಬಸವ ಸಮಿತಿ ಇಂಡಿ, ಅಲ್ ಹಸಿಂ ಏಜ್ಯೂಕೇಶನಲ್ ವೆಲ್‍ಫೇರ್ & ಚಾರಿಟೇಬಲ್ ಟ್ರಸ್ಟ ಹಾಗೂ ಮರಕಜೆ ತಂಜಿಮ್ ಅಹಲೆ ಸುನ್ನತ್ ವ ಜಮಾತ ವಿಜಯಪುರ ರವರಿಗೆ ಸನ್ಮಾನಿಸಲಾಯಿತು. 

 ಕಾರ್ಯಕ್ರಮದಲ್ಲಿ  ಮಹಾದೇವಿ ಗೋಕಾಕ, ಡಾ. ಸುರೇಶ ಚವ್ಹಾಣ, ಡಾ. ಜೆ.ಎಂ. ಬಿಳಗಿ, ಡಾ. ರಾಜೇಶ್ವರ ಗೋಲಗೇರಿ, ಡಾ. ಜ್ಯೋತಿ ಪಾಟೀಲ, ಜಿಲ್ಲಾ ಎನ್.ಎಸ್.ಎಸ್. ಘಟಕದ ನೋಡಲ್ ಅಧಿಕಾರಿಗಳಾದ ಹೆಚ್.ಎಂ. ಸಜ್ಜಾದೆ, ರವರು ಉಪಸ್ಥಿತರಿದ್ದರು.
 ಏ.ಆರ್.ಟಿ. ಕೇಂದ್ರದ ಆಪ್ತಸಮಾಲೋಚಕರಾದ ರವಿ ಕಿತ್ತೂರ ರವರು ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುರೇಶ ಹೊಸಮನಿ ಸ್ವಾಗತಿಸಿದರು, ನರ್ಸಿಂಗ ವಿಧ್ಯಾರ್ಥಿಗಳು ಪ್ರಾರ್ಥನೆಯನ್ನು ಹೇಳಿದರು, ಐ.ಸಿ.ಟಿ.ಸಿ. ಕೇಂದ್ರ ಸಿಂದಗಿ ಆಪ್ತಸಮಾಲೋಚಕರಾದ ಮಲ್ಲೇಶಪ್ಪ ಸಾಗರ  ವಂದಿಸಿದರು. 

ಜಾಗೃತಿ ಜಾಥಾ : ಇದಕ್ಕೂ ಮೊದಲು ಬೆಳಿಗ್ಗೆ  ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜನಜಾಗೃತಿ ರ್ಯಾಲಿಗೆ ಜಿಲ್ಲಾಧಿಕಾರಿಗಳಾದ ಶಿವಕುಮಾರ ಕೆ.ಬಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ. ಸುಂದರೇಶಬಾಬು ರವರು ಜಂಟಿಯಾಗಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

 ಜಾಗೃತಿ ಜಾಥಾವು ಗಾಂಧಿ ಸರ್ಕಲ್‍ದಿಂದ ಶಿವಾಜಿ ಸರ್ಕಲ್ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳವರ ಕಛೇರಿ ತಲುಪಿತು. ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಅಧಿಕಾರಿಗಳಾದ ಡಾ. ಸುರೇಶ ಚವ್ಹಾಣ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹೆಂದ್ರ ಕಾಪಸೆ, ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಾದ ಡಾ.ಎಸ್.ಎಸ್. ಮೈಲಾರೆ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಜೆ.ಎಂ. ಬಿಳಗಿ, ಡಾ. ರಾಜೇಶ್ವರ ಗೋಲಗೇರಿ, ಡಾ. ಜ್ಯೋತಿ ಪಾಟೀಲ,ಡಾ. ಸಂಪತ್ತ ಗುಣಾರಿ, ಸ್ವಯಂ ಸೇವಾ ಸಂಘಗಳ ಅಧ್ಯಕ್ಷರಾದ ಪೀಟರ್ ಅಲೆಕ್ಸಾಂಡರ್, ಲಯನ್ಸ ರಕ್ತನಿಧಿ ಕೇಂದ್ರದ ವೈದ್ಯರಾದ ಡಾ. ಪ್ರೇಮಾನಂದ ಅಂಬಲಿ ಹಾಗೂ ವಿವಿಧ ನರ್ಸಿಂಗ ಕಾಲೇಜುಗಳ ಪ್ರಾಧ್ಯಾಪಕರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನರ್ಸಿಂಗ ವಿಧ್ಯಾರ್ಥಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.