ಕಾಂಗ್ರೆಸ್ ನಾಯಕರಿಗೆ ಬಿಜೆಪಿಯಿಂದ ಸವಾಲು 

ಕಾಂಗ್ರೆಸ್ ನಾಯಕರಿಗೆ ಬಿಜೆಪಿಯಿಂದ ಸವಾಲು 

ವಿಜಯಪುರ,ಡಿ.6: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರಿಗೆ ಕಾಂಗ್ರೆಸ್ ಸರ್ವವಿಧದಲ್ಲಿಯೂ ಅನ್ಯಾಯ ಮಾಡಿದೆ. ಈ ಬಗ್ಗೆ ನಾವು ಬಹಿರಂಗ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರ ಮುಂದೆ ವಿವರಿಸಲು ಸಿದ್ಧ. ನಾವೇ ವೇದಿಕೆ ಸಿದ್ಧಪಡಿಸುತ್ತೇವೆ ಬಂದು ವಿವರಣೆ ನೀಡಿ ಎಂದು ಬಿಜೆಪಿಯ ಅನೇಕ ದಲಿತ ಮುಖಂಡರು ಕಾಂಗ್ರೆಸ್ ನಾಯಕರಿಗೆ ಚಾಲೆಂಜ್ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡರಾದ ಚಿದಾನಂದ ಚಲವಾದಿ, ಅಭಿಷೇಕ ಚಕ್ರವರ್ತಿ ಮೊದಲಾದವರು ಈ ಸವಾಲು ಹಾಕಿದರು.
ಚಿದಾನಂದ ಚಲವಾದಿ ಮಾತನಾಡಿ, ಡಾ.ಅಂಬೇಡ್ಕರ ಅವರಿಗೆ ಅಂತ್ಯ ಸಂಸ್ಕಾರಕ್ಕೆ ಜಾಗ ಸಹ ಅಂದಿನ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಡಾ.ಅಂಬೇಡ್ಕರ ಅವರ ಧರ್ಮಪತ್ನಿ, ಡಾ.ಅಂಬೇಡ್ಕರ ಅವರ ಆಪ್ತ ಸಹಾಯಕರು ಈ ಬಗ್ಗೆ ಅಂದಿನ ಪ್ರಧಾನಿ ನೆಹರೂ ಅವರಿಗೆ ನೆರವು ಕೋರಿದಾಗ ನೆಹರೂ ಯಾವುದೇ ರೀತಿ ಸ್ಪಂದನೆ ನೀಡಲಿಲ್ಲ. ಆದರೂ ವಿಜಯಪುರ ಜಿಲ್ಲೆಯ ನಾಯಕರು ಕಾಂಗ್ರೆಸ್ ನಾಯಕರು ಡಾ.ಅಂಬೇಡ್ಕರ ಅವರಿಗೆ ಅನ್ಯಾಯ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ, ಇದು ವಿಜಯಪುರ ಜಿಲ್ಲೆಯ ಕಾಂಗ್ರೆಸ್ ನಾಯಕರ ಆತ್ಮವಂಚನೆಯಿಂದ ಕೂಡಿದ ಹೇಳಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಡಾ.ಬಿ.ಆರ್. ಅಂಬೇಡ್ಕರ ಅವರನ್ನು ಪ್ರತಿ ಹಂತದಲ್ಲಿಯೂ ಕಾಂಗ್ರೆಸ್ ಅನ್ಯಾಯ ಮಾಡುತ್ತಲೇ ಬಂದಿದೆ. ಹಲವಾರು ಡಾ.ಅಂಬೇಡ್ಕರ ಅವರೇ ಕಾಂಗ್ರೆಸ್ ನಿಲುವುಗಳನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಆದರೂ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಳ್ಳುವ ಮೂಲಕ ಡಾ.ಅಂಬೇಡ್ಕರ ಅವರನ್ನು ಅಗೌರವ ತೋರುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಅಂಬೇಡ್ಕರ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಡಾ.ಅಂಬೇಡ್ಕರ ಅವರ ಚಿಂತನೆಗಳನ್ನು ಜಾಗತಿಕಮಟ್ಟದಲ್ಲಿ ಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಡಾ.ಅಂಬೇಡ್ಕರ ಅವರು ವಾಸಿಸಿದ ನೆಲ ಸೇರಿದಂತೆ ಅವರ ಹೆಜ್ಜೆಗುರುತುಗಳನ್ನು, ಕರ್ಮಭೂಮಿಯನ್ನು ಪಂಚತೀರ್ಥ ಎಂದು ಕರೆದು ಅಭಿವೃದ್ಧಿಪಡಿಸುವ ಮೂಲಕ ಡಾ.ಅಂಬೇಡ್ಕರ ಅವರಿಗೆ ನಿಜವಾದ ಗೌರವ ಸಲ್ಲಿಸುತ್ತಿದ್ದಾರೆ ಎಂದರು.
ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿ, ಇಂದಿರಾಗಾಂಧಿ, ಪಂ.ಜವಾಹರ ಲಾಲ್ ನೆಹರೂ ಅವರಿಗೆ ಭಾರತರತ್ನ ದೊರಕಿತು, ಆದರೆ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಾರತರತ್ನ ದೊರೆಯಲಿಲ್ಲ. ಇದು ಡಾ.ಅಂಬೇಡ್ಕರ ಅವರಿಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು. 
ಭಾರತೀಯ ಸಂವಿಧಾನ ರಚಿಸಿದ ಮಹಾನ್ ಚೇತನ ಡಾ.ಅಂಬೇಡ್ಕರ ಅವರನ್ನೇ ಸೋಲಿಸಲು ಕಾಂಗ್ರೆಸ್ ಯತ್ನಿಸಿದೆ. ಈ ಎಲ್ಲ ಅಂಶಗಳು ಕಾಂಗ್ರೆಸ್ ಯಾವ ರೀತಿ ಡಾ.ಅಂಬೇಡ್ಕರರಿಗೆ ಅನ್ಯಾಯ ಮಾಡಿದೆ ಎಂಬುದು ಸಾಬೀತುಮಾಡಿವೆ. ಈ ಎಲ್ಲ ಬಗ್ಗೆ ನಾವು ವಿವರಿಸಲು ಸಿದ್ಧ. ಕಾಂಗ್ರೆಸ್ ಒಂದು ಬೆಂಕಿಚೆಂಡು, ಅದರ ಬಳಿಗೆ ಯಾರೂ ಹೋಗಬಾರದು. ಅದು ನಮ್ಮನ್ನು ಉದ್ಧಾರ ಮಾಡುವುದಿಲ್ಲ ಎಂದರು.
ಪಾಲಿಕೆ ಸದಸ್ಯ ಗೋಪಾಲ ಘಟಕಾಂಬಳೆ, ಕಿರಣರಾಜು, ಹಣಮಂತ ಬಿರಾದಾರ, ಕೃಷ್ಣಾ ಗುನ್ನಾಳಕರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.