ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಬೇಕಾದರೆ ಮಕ್ಕಳ ರಜಾ ದಿನಗಳು ವ್ಯರ್ಥವಾಗಬಾರದು

ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಬೇಕಾದರೆ ಮಕ್ಕಳ ರಜಾ ದಿನಗಳು ವ್ಯರ್ಥವಾಗಬಾರದು

ಧಾರವಾಡ,ಅ.14 : ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಬೇಕಾದರೆ ಮಕ್ಕಳ ರಜಾ ದಿನಗಳಲ್ಲಿ ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಇಂದು ಅತ್ಯಗತ್ಯವಾಗಿದೆ. ಗ್ರಾಮೀಣ ಮತ್ತು ಹಿಂದುಳಿದ ಮಕ್ಕಳು ರಜಾದಿನಗಳನ್ನು ವ್ಯರ್ಥವಾಗಿ ಕಳೆಯದಿರಲೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ವೇದವ್ಯಾಸ ಕೌಲಗಿ ಮಾತನಾಡಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಹಾಗೂ ಗುಬ್ಬಚ್ಚಿ ಗೂಡು ಶಾಲೆ, ಮಾಳಾಪೂರ ಇವರ ಸಹಯೋಗದೊಂದಿಗೆ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶದ ಮಕ್ಕಳ ಮಧ್ಯಂತರ ರಜೆಯ 10 ದಿನಗಳ ಶಿಬಿರವನ್ನು ವಾದ್ಯ ನುಡಿಸುವ ಮೂಲಕ ಮತ್ತು ಸಸಿಗೆ ನೀರೆರೆಯುವ ಮುಖಾಂತರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು, ಹಿಂದುಳಿದ ಪ್ರದೇಶದ ಮಕ್ಕಳಿಗಾಗಿಯೇ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ವರ್ಷಪೂರ್ತಿ ಹಲವಾರು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಇಂತಹ ಶಿಬಿರಗಳು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕವೆನಿಸಿವೆ. ಶಾಲಾ ಅವಧಿಯಲ್ಲಿ ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾದ ಮಕ್ಕಳ ದೈನಂದಿನ ದಿನಚರಿಯಿಂದ ಮುಕ್ತಗೊಳಿಸಿ ಕೆಲವು ದಿನಗಳಾದರೂ ಅವರಿಗೆ ಪಠ್ಯೇತರ ಚಟುವಟಿಕೆಗಳಾದ ಜನಪದ ಆಟಗಳು, ವಾದ್ಯಗಳು, ಸಂಗೀತ, ನೃತ್ಯ, ನಾಟಕ ಮೊದಲಾದವುಗಳಲ್ಲಿ ಭಾಗವಹಿಸುವಂತೆ ಮಾಡಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಇಂತಹ ಶಿಬಿರಗಳು ಮಾಡುತ್ತಿರುವುದು ತುಂಬಾ ಸಂತೋಷಕರ. ಗುಬ್ಬಚ್ಚಿ ಗೂಡು ಶಾಲೆಯು ಇಂತಹ ಕಾರ್ಯವನ್ನು ಕೈಗೊಂಡಿದ್ದು ಶ್ಲಾಘನೀಯವಾದುದು ಎಂದು ಶಿಬಿರಕ್ಕೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾದ ಡಾ. ಡಿ.ಎಂ. ಹಿರೇಮಠ ಮಾತನಾಡುತ್ತಾ, ನಗರದ ಮಕ್ಕಳಲ್ಲಿ ಗ್ರಾಮೀಣ ಆಟಗಳ ಕೊರೆತೆ ಎದ್ದು ಕಾಣುತ್ತದೆ. ಮೊಬೈಲ್, ಟಿ ವಿ ಗಳು ಆಕರ್ಷಿಸಿದಷ್ಟು ನಮ್ಮ ಹಳ್ಳಿಯ ಚಿನ್ನಿಕೋಲು, ಒಟ್ಟಪ್ಪ, ಗುಂಡ-ಗಜಗ, ಬಗರಿ ಆಟಗಳ ಆಕರ್ಷಿಸುವುದಿಲ್ಲ. ದೈಹಿಕವಾಗಿ ಸದೃಢರಾಗಲು ಇಂತಹ ಆಟಗಳು ಮಕ್ಕಳಿಗೆ ಅಗತ್ಯವಾಗಿವೆ. ದೈಹಿಕವಾಗಿ ಸಬಲರಾಗಿದ್ದರೇ ಮಾತ್ರ ಬೌದ್ಧಿಕವಾಗಿ ಬೆಳೆಯಲು ಸಾದ್ಯ. ಶಹರದ ಹಿಂದುಳಿದ ಪ್ರದೇಶದಲ್ಲಿನ ಮಕ್ಕಳಿಗೆ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸುತ್ತಿರುವ ಅಕಾಡೆಮಿಯ ಅಧ್ಯಕ್ಷರಿಗೆ ಮತ್ತು ಗುಬ್ಬಚ್ಚಿ ಗೂಡು ಶಾಲೆಯ ಸಿಬ್ಬಂದಿಗೆ ಅಭಿನಂದನೆ ತಿಳಿಸಿದರು.

ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ಅಕಾಡೆಮಿಯ ಸಿಬ್ಬಂದಿ ಶ್ರೀಮತಿ ಮಂಜುಳಾ ಪಾಟೀಲ ಅವರು ಮಕ್ಕಳಿಗೆ ಶುಭಕೋರುತ್ತ ಮಕ್ಕಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಹಲವು ಸಂಘ-ಸಂಸ್ಥೆಗಳಲ್ಲಿ ಗುಬ್ಬಚ್ಚಿ ಗೂಡು ಶಾಲಾ ಬಳಗವು ವಿಶಿಷ್ಟವೆನಿಸುತ್ತದೆ. ಏಕೆಂದರೆ ನಗರದ ಹಿಂದುಳಿದ ಪ್ರದೇಶದಲ್ಲಿನ ಮಕ್ಕಳು ಹಳ್ಳಿಯ ಮಕ್ಕಳಿಗಿಂತ ದೈಹಿಕವಾಗಿ, ಬೌದ್ಧಿಕವಾಗಿ ಹಿಂದುಳಿದಿದ್ದಾರೆ. ನಿರ್ಲಕ್ಷಕ್ಕೆ ಒಳಗಾದ ಇಂಥವರನ್ನು ಗುರುತಿಸಿ ಈ ಶಿಬಿರದಲ್ಲಿ ಭಾಗವಹಿಸುವಂತೆ ಮಾಡಿ, ಅವರ ಪ್ರತಿಭೆಗೆ ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹವಾದುದು ಎಂದರು.

ಶಿಬಿರವನ್ನು ಉದ್ದೇಶಿಸಿ ಮಾತನಾಡಿದ, ಶಂಕರ ಹಲಗತ್ತಿಯವರು ಶಿಬಿರಕ್ಕೆ ಪ್ರತಿದಿನ ಇಬ್ಬರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಾರೆ. ಅವರು ನಾಡಿನ ಶ್ರೇಷ್ಠಕಲಾವಿದರಾಗಿದ್ದು, ಮಕ್ಕಳೊಂದಿಗೆ ಬೆರೆತು ವಿವಿಧ ಕೌಶಲ್ಯಗಳನ್ನು ನೀಡುವುದರಿಂದ ಅದರ ಉಪಯೋಗವನ್ನು ತಾವು ಪಡೆದುಕೊಳ್ಳಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು. ಶಿಬಿರದ ಸಂಯೋಜಕರಾದ ಶ್ರೀಮತಿ ವಿಜಯಲಕ್ಷ್ಮೀ ಅ. ಸುಭಾಂಜಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಭಾಗವಹಿಸಿದ 12 ಶಾಲೆಯ 80 ಮಕ್ಕಳಿಗೆ ದಿನಚರಿ ಪುಸ್ತಕ ಮತ್ತು ಪೆನ್ನನ್ನು ವಿತರಿಸಿ ಪ್ರೋತ್ಸಾಹಿಸಿ ಮಾತನಾಡಿದರು.

ಕಾರ್ಯಕ್ರದಲ್ಲಿ ಕಮಲಾಪೂರದ ಬಸವಣ್ಣೆಪ್ಪ ಅಣ್ಣಿಗೇರಿ ಅವರು ಹೆಜ್ಜೆಮೇಳದ ಹಾಡುಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಸಂಗೀತ ಶಿಕ್ಷಕರಾದ ಎ.ಎಲ್. ದೇಸಾಯಿ, ಮಂಜುನಾಥ ಭಜಂತ್ರಿ ಮತ್ತು ಶಿಬಿರದ ನಿರ್ದೇಶಕ ಚಿದಾನಂದ ಮಾಸನಕಟ್ಟಿ, ಸಂಘಟಿಕರಾದ ಶ್ರೀಮತಿ ಭಾರತಿ ಪ್ರಕಾಶ ಸಾಬಳೆ, ಪ್ರಗತಿ ಸಾಬಳೆ, ಶಕುಂತಲಾ ಕೊಕಾಟೆ, ವಿದ್ಯಾ ಡೇಂಬ್ರೆ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಶ್ರೀಮತಿ ಲಕ್ಷ್ಮೀ ಜಾಧವ ವಂದನಾರ್ಪಣೆಯೊಂದಿಗೆ ಸಮಾರಂಭಕ್ಕೆ ವಿದಾಯ ಹೇಳಿದರು.