ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಸಮಾರೋಪಕ್ಕೆ ಸಂಭ್ರಮದ ತೆರೆ

ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಸಮಾರೋಪಕ್ಕೆ ಸಂಭ್ರಮದ ತೆರೆ

ಬಾಗಲಕೋಟೆ,ಡಿ.4: ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವಕ್ಕೆ ಭಾನುವಾರ ರಾತ್ರಿ ಸಂಭ್ರಮದ ತೆರೆ ಬಿದ್ದಿತು.

ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ವೇದಿಕೆಯಲ್ಲಿ ಭಾನುವಾರ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಗಾಯಕ ರಾಜೇಶ ಕೃಷ್ಣನ್ ಅವರ ತಂಡದ ಗೀತೆಗಳಿಗೆ ಜನ ಉತ್ಸಾಹದಿಂದ ಚಪ್ಪಾಳೆ ತಟ್ಟಿದರು.
ಬ್ಯಾಂಕಿನ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ರಾತ್ರಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ನೋಡಿ ರಾಜೇಶಕೃಷ್ಣನ್ ಬೆರಗಾದರು.

ಬ್ಯಾಂಕುಗಳು ಶತಮಾನೋತ್ಸವ ಕಾಣುವುದೇ ಅಪರೂಪ ಆದರೆ ಬಸವೇಶ್ವರ ಸಹಕಾರಿ ಬ್ಯಾಂಕ ನೂರು ವರ್ಷ ಗ್ರಾಹಕರಿಗೆ ಒಳ್ಳೆಯ ಸೇವೆಯನ್ನು ನೀಡುತ್ತು ಸಾಗುತ್ತಿರುವುದನ್ನು ನೋಡಿದರೆ ಇದೊಂದು ಅದ್ಭುತ ಬ್ಯಾಂಕ್ ಆಗಿದೆ.ಬ್ಯಾಂಕಿನ ಸಾಧನೆಗೆ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿಯವರು ಸೇರಿ ಅವರ ಬಳಗದ ಶ್ರಮ ಶ್ಲಾಘನೀಯ ಎಂದರು.

ಗಮನಸೆಳೆದ ರಸಮಂಜರಿ: ಬ್ಯಾಂಕಿನ ಶತಮಾನೋತ್ಸವದ ಅಂಗವಾಗಿ ಕಳೆದ ಎರಡು ತಿಂಗಳಿಂದ ಹಲವಾರು ಕಾರ್ಯಕ್ರಮವನ್ನು ಬಸವೇಶ್ವರ ಸಹಕಾರಿ ಬ್ಯಾಂಕ್ ನಡೆಸಿಕೊಂಡು ಬಂದಿದ್ದು ಸಮಾರೋಪ ಸಮಾರಂಭಕ್ಕೆ ಸಂಗೀತ ರಸಮಂಜರಿ ಕಾರ್ಯಕ್ರಮ ಭಾನುವಾರ ಮೆರಗು ತಂದಿತು.

ರಾಜೇಶ ಕೃಷ್ಣನ್ ಅವರು ಡಾ.ರಾಜಕುಮಾರ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಗೋಲ್ಡನ್ ಸ್ಟಾರ್  ಗಣೇಶ ಅವರು ನಟಿಸಿರುವ ವಿವಿಧ ಚಿತ್ರಗಳ ಹಾಡು ಹಾಗೂ ಉಸಿರಿ ಉಸಿರು ಎಂಬ ಗೀತೆಯನ್ನು ಹಾಡುತ್ತಿದ್ದಂತೆ ನೆರೆದ ಸಹಸ್ರಾರು ಜನ ಚಪ್ಪಾಳೆ,ಸೀಳ್ಯೆ ಹಾಕಿ ಸಂಭ್ರಮಪಟ್ಟರು.ಸುಮಾರು ಮೂರು ಗಂಟೆಗಳ ಕಾಲ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಿದ್ದು ವಿಶೇಷವಾಗಿತ್ತು.

ಸನ್ಮಾನ :ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿಯವರನ್ನು ಶಾಸಕ ಎಚ್.ವೈ.ಮೇಟಿ ಸೇರಿದಂತೆ ಅನೇಕ ಸಂಘಟನೆಗಳು,ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಶತಮಾನೋತ್ಸವ ಸಮಾರಂಭದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ 20 ಮಹಿಳಾ ಸಂಘಟನೆಗಳ ಮುಖ್ಯಸ್ಥರನ್ನು ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿಯವರು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿದರು. ಚಿತ್ರಕಲಾ ಪ್ರದರ್ಶನ ನೆರವೇರಿಸಿಕೊಟ್ಟ ಮಹಾದೇವ ಕವಿಶೆಟ್ಟಿ,ವ್ಯಂಗ್ಯ ಚಿತ್ರಕಲಾ ಪ್ರದರ್ಶನದ ರೂವಾರಿ ವೆಂಕಟೇಶ ಇನಾಂದಾರ ಮತ್ತು ಭಜಂತ್ರಿಯವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಿಸ್ ಇಂಡಿಯಾ ಶಿಲ್ಪಾ ಲದ್ದಿಮಠ ಅವರು ವೇದಿಕೆಯ ಮೇಲೆ ಕ್ಯಾಟ್ ವಾಕ್ ಮಾಡುತ್ತಿದ್ದಂತೆ ನೆರೆದ ಜನ ಚಪ್ಪಾಳೆ ತಟ್ಟಿ ಅಭಿನಂಧಿಸಿದರು.
ರಾಜೇಶ ಕೃಷ್ಣನ್ ಅವರ ತಂಡದೊಂದಿಗೆ ಝೀ ಕನ್ನಡ ವಾಹಿನಿಯ ಹರ್ಷಾ,ಚೆನ್ನಪ್ಪ,ಸುಹಾನ ಅವರು ಭಾಗವಹಿಸಿದ್ದರು. ಬಸವೇಶ್ವರ ಸಹಕಾರಿ ಬ್ಯಾಂಕಿನ ಬ್ರ್ಯಾಂಚ್ ವ್ಯವಸ್ಥಾಪಕ ಮಹಾಬಳೇಶ ಗುಡಗುಂಟಿ ಹಾಗೂ ತಾರಾಕೇಶ್ವರಿ ನಿರೂಪಿಸಿದರು.