ಬಾಲಕರು ರಾಷ್ಟ್ರದ ಜವಾಬ್ದಾರಿಯುತ ನಾಗರಿಕರು:ಎಚ್.ಬಿ.ಮುಕ್ತಾ

ಬಾಲಕರು ರಾಷ್ಟ್ರದ ಜವಾಬ್ದಾರಿಯುತ ನಾಗರಿಕರು:ಎಚ್.ಬಿ.ಮುಕ್ತಾ

ವಿಜಯಪುರ, ,ಜೂ,14: ಇಂದಿನ ಬಾಲಕರು ನಾಳಿನ ರಾಷ್ಟ್ರದ ಜವಾಬ್ದಾರಿಯುತ ನಾಗರಿಕರು ಅವರನ್ನು ಬಾಲಕಾರ್ಮಿಕರನ್ನಾಗಿಸದೇ ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಚ್.ಬಿ. ಮುಕ್ತಾ ಹೇಳಿದರು.

ಅವರು ನಗರದ ಶ್ರೀ ಸಿದ್ದೇಶ್ವರ ಕಲಾಭವನದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ  ಜಿಲ್ಲಾಡಳಿತ, ಕಾರ್ಮಿಕ ಇಲಾಖೆ , ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಸರಕಾರ ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವುದು ಪ್ರತಿಯೊಂದು ಇಲಾಖೆಯ ಜವಾಬ್ದಾರಿಯಾಗಿದೆ. ಸರಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ಮುಟ್ಟುಹಾಗೆ ಸರಕಾರ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಬಡವರಿಗೆ, ದೀನ ದಲಿತರಿಗೆ, ಕಾರ್ಮಿಕರಿಗೆ ತಲುಪಿದರೆ ಮಾತ್ರ ಯೋಜನೆಗಳಿಗೆ ಮಹತ್ವ ಬರಲು ಸಾಧ್ಯ. ಬಾಲ ಕಾರ್ಮಿಕರನ್ನು ಪತ್ತೆ ಹಚ್ಚುವಲ್ಲಿ ಕೇವಲ ಸರಕಾರದ ಕೆಲಸವಾಗದೆ ಇದಕ್ಕೆ ನಾಗರಿಕರ ಜವಾಬ್ದಾರಿಯು ಅಗತ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಪಿ. ಶ್ರೀನಿವಾಸ ಮಾತನಾಡಿ, ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸಲು ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ದಿನಾಚರಣೆಯನ್ನು ಕೇವಲ ಕಾಟಾಚಾರಕ್ಕೆ ನಡೆಸದೆ ಬಾಲ ಕಾರ್ಮಿಕರನ್ನು ಗುರುತಿಸಿ ಶೈಕ್ಷಣಿಕ ಕಲಿಕೆಗೆ ಕರೆತರಬೇಕು. ಮುಗ್ದ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ವಿವಿಧ ಉದ್ದೆಮಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವುದರ ಮೂಲಕ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಕಾರ್ಮಿಕ ಇಲಾಖೆ ಕಾರ್ಯೋನ್ಮುಕವಾಗಬೇಕು ಎಂದರು.

ಅತಿಥಿ ಉಪನ್ಯಾಸಕರಾಗಿ ಹಿರಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಮಾತನಾಡಿ, ಮಕ್ಕಳು ರಾಷ್ಟ್ರದ ಸಂಪತ್ತು ಅವರ ಹಕ್ಕು, ರಕ್ಷಣೆ ಮತ್ತು ಸುರಕ್ಷತೆಯನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ. ಮಕ್ಕಳಿಗಾಗಿ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಮಕ್ಕಳ ಪಾಲಕರು ತಮ್ಮ ಮಕ್ಕಳಿಗೆ ಸರಕಾರಿ ಶಾಲೆಯಲ್ಲಿ ಶಿಕ್ಷಣ ನೀಡುವುದರ ಮೂಲಕ ಸರಕಾರ ಯೊಜನೆಗಳನ್ನು ಸದ್ಭಳಿಕೆ ಮಾಡಿಕೊಳ್ಳಬೇಕು, ಬಾಲ ಕಾರ್ಮಿಕ ಪದ್ದತಿ ಹೊಗಲಾಡಿಸಲು ಸಮಾಜದ ಪ್ರತಿಯೊಬ್ಬರು ಇದಕ್ಕೆ ಕೈಜೋಡಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳಾದ ಡಾ. ಶಂಕರ ವಣಕ್ಯಾಳ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಈರಣ್ಣ ಗಾಳಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಮಹಾದೇವ ದೇವರ, ಬಾಲ ನ್ಯಾಯಮಂಡಳಿ ಸದಸ್ಯರಾದ ದಾನೇಶ ಅವಟಿ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಶ್ರೀನಿವಾಸ ವಾಲಿಕಾರ, ಕಾರ್ಮಿಕ ಇನ್ಸಪೆಕ್ಟರ್ ಸುದಿಂದ್ರ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾ.ಜೆರಾಲ್ಡ್ ಡಿಸೋಜಾ ಎಸ್.ಜೆ. ಸರಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪೂಜಾರಿ, ನಗರ ಪ್ರಭಾರಿ ಬಿ.ಇ.ಓ. ಗಂಗಶೆಟ್ಟಿ,  ಬಸವ ಸಾಹಿತ್ಯ ವೇದಿಕ ಅಧ್ಯಕ್ಷ ಬಂಡೆಪ್ಪ ತೇಲಿ ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕರಾದ ಶ್ರೀಮತಿ ಸುನಂದಾ ತೋಳಬಂದಿ, ಮುಂತಾದವರು ಉಪಸ್ಥಿತರಿದ್ದರು. 

ಕಾರ್ಮಿಕ ಅಧಿಕಾರಿಗಳಾದ ಎ.ಜಿ. ಬಾಳಗಟ್ಟಿ ಸ್ವಾಗತಿಸಿದರು. ಬಿ.ಆರ್. ಜಾಧವ ವಂದಿಸಿದರು. ಬೆಳಿಗ್ಗೆ  8-30 ಕ್ಕೆ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಬಿ.ಮುಕ್ತಾ ಚಾಲನೆ ನೀಡಿದರು.  ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.