ಜಿಲ್ಲೆಯಲ್ಲಿ ಜನವರಿ 16 ರಿಂದ ಸೇನಾ ನೇಮಕಾತಿ ರ್ಯಾಲಿ

ಜಿಲ್ಲೆಯಲ್ಲಿ ಜನವರಿ 16 ರಿಂದ ಸೇನಾ ನೇಮಕಾತಿ ರ್ಯಾಲಿ

ಬಾಗಲಕೋಟೆ, ನ.14: ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಜನವರಿ 16, 2018 ರಿಂದ 21 ರವರೆಗೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸೈನಿಕ ಮಂಡಳಿಯ ಅಧ್ಯಕ್ಷರಾದ ಪಿ.ಎ.ಮೇಘಣ್ಣವರ ಹೇಳಿದರು.
    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಸೇನಾ ನೇಮಕಾತಿ ರ್ಯಾಲಿಯಲ್ಲಿ 11 ಜಿಲ್ಲೆಯ ಅಂದಾಜು 20 ರಿಂದ 25 ಸಾವಿರ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸ್ನಾನ, ಶೌಚಾಲಯ, ಸಾರಿಗೆ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು. ವಾಸಕ್ಕೆ ನವನಗರದ ಅಂಬೇಡ್ಕರ ಭವನ, ಜಗಜೀವನರಾಂ ಭವನ ಹಾಗೂ ದೇವರಾಜ ಅರಸು ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
    ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ಶಾಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿಗೆ ನೇಮಿಸಲಾದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಸತಿ ಸೌಲಭ್ಯಕ್ಕಾಗಿ ಕ್ರೀಡಾ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಈ 7 ದಿನಗಳ ವರೆಗೆ ಮಕ್ಕಳಿಗೆ ಸೇನಾ ನೇಮಕಾತಿ ರ್ಯಾಲಿ ಅಂಗವಾಗಿ ರಜೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಚರ್ಚಿಸಲಾಗಿದ್ದು, ಅನುಮತಿ ನೀಡಲು ಒಪ್ಪಿರುವುದಾಗಿ ತಿಳಿಸಿದರು. ಕ್ರೀಡಾ ಶಾಲೆಯ ಮಕ್ಕಳಿಗೆ ರಜೆ ನೀಡಿದರೂ ಅವರಿಗೆ ವಿಶೇಷ ತರಗತಿ ತೆಗೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.  
    ಸೇನಾ ನೇಮಕಾತಿ ರ್ಯಾಲಿಯ ಉಸ್ತುವಾರಿ ವಹಿಸಿದ ಮಂಗಳೂರಿನ ಸೇನಾ ನೇಮಕಾತಿ ಕಚೇರಿಯ ಕರ್ನಲ್ ಎಂ.ಎ.ರಾಜಮಣ್ಣಾರ್ ನೇಮಕಾತಿ ರ್ಯಾಲಿ ಕುರಿತು ವಿವರಣೆ ನೀಡುತ್ತಾ, ಈ ರ್ಯಾಲಿಯಲ್ಲಿ ಬಾಗಲಕೋಟ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೇರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಸೋಲ್ಜರ ಜನರಲ್, ಸೋಲ್ಜರ ಟೆಕ್ನೋಲಜಿ, ಸೋಲ್ಜರ ಕುಕ್ & ಎಸ್‍ಕೆಟಿ ಹಾಗೂ ಸೋಲ್ಜರ ಟ್ರೇಡ್ಸ್‍ಮನ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ವರ್ಷ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳ ನೇಮಕಾತಿ ರ್ಯಾಲಿ ನಡೆಯಲಿದೆ ಎಂದರು.
    ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ನವೆಂಬರ 20 ರಿಂದ ಜನವರಿ 1, 2018ರ ವರೆಗೆ ವೆಬ್‍ಸೈಟ್ ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ನಿಂದ ಆನ್‍ಲೈನ್ ಮೂಲಕ ಬೇರೆ ಬೇರೆ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ನೇಮಕಾತಿ ರ್ಯಾಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು. ನೇಮಕಾತಿಯಲ್ಲಿ ಮೂರು ಹಂತಗಳಲ್ಲಿ ಆಯ್ಕೆ ನಡೆಯಲಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ಹಾಗೂ ದೂಸಂ.0824-2458376ಗೆ ಸಂಪರ್ಕಿಸಬಹುದಾಗಿದೆ ಎಂದರು.
    ರ್ಯಾಲಿ ನಡೆಯುವ ಕ್ರೀಡಾಂಗಣವನ್ನು ಪ್ರತಿದಿನ ಸ್ವಚ್ಚವಾಗಿಸುವಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಅಲ್ಲದೇ ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಶಾಮಿಯಾನ, ದ್ವನಿವರ್ಧಕ ವ್ಯವಸ್ಥೆ ಮಾಡುವಂತೆ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಕ್ರೀಡಾಂಗಣದ ಹೊರಗಡೆ 7 ದಿನಗಳ ವರೆಗೆ ಕ್ಯಾಂಟೀನ್ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದರು. ನೇಮಕಾತಿ ರ್ಯಾಲಿಯಲ್ಲಿ ಯಾವುದೇ ರೀತಿಯ ತಿಂದರೆಯಾಗದಂತೆ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿರುವುದಾಗಿ ತಿಳಿಸಿದರು.
    ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಜಗಾಪೂರ, ಸುಬೇದಾರ ವಿಲಭಾಗ್ ಸಿಂಗ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.