ಅಹ್ಮದ್ ಪಟೇಲ್ ಆಪ್ತನ ಮನೆ ಮೇಲೆ ಇಡಿ ದಾಳಿ

ಅಹ್ಮದ್ ಪಟೇಲ್ ಆಪ್ತನ ಮನೆ ಮೇಲೆ ಇಡಿ ದಾಳಿ

ನವದೆಹಲಿ,ನ.30: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಆಪ್ತ ಸಂಜೀವ್ ಮಹಾಜನ್ ಮತ್ತು ಇತರೆ ಉದ್ಯಮಿಗಳ ಮನೆ ಹಾಗೂ ಇತರೆ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಯಾಂಡೆಸರಾ ಗ್ರೂಪ್ ಆಫ್ ಕಂಪನಿಗಳ ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಯೂರ ವಿಹಾರ್ ಮೊದಲ ಹಂತದಲ್ಲಿರುವ ಹಾಗೂ ಬಾಬರ್ ರಸ್ತೆಯಲ್ಲಿರುವ ಮಹಾಜನ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಡಿ ವಕ್ತಾರರು ತಿಳಿಸಿದ್ದಾರೆ.

ದ್ವಾರಕಾದಲ್ಲಿರುವ ಉದ್ಯಮಿ ಘನಶ್ಯಾಮ್ ಪಾಂಡೆ ನಿವಾಸ, ಲಕ್ಷ್ಮಿನಗರದಲ್ಲಿರುವ ಲಕ್ಷ್ಮಿಚಂದ್ ಗುಪ್ತಾ ಮತ್ತು ಘಾಜಿಯಾಬಾದ್ ನಲ್ಲಿರುವ ಅರವಿಂದ್ ಗುಪ್ತಾ ಅವರ ನಿವಾಸಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಮೂವರು  ಸ್ಯಾಂಡೆಸರಾ ಗ್ರೂಪ್ ಆಫ್ ಕಂಪನಿಗಳೊಂದಿಗೆ ಸಂಪರ್ಕ ಗೊಂದಿದ್ದರು ಎನ್ನಲಾಗಿದೆ.

ಸ್ಯಾಂಡೆಸರಾ ಗ್ರೂಪ್ ಆಫ್ ಕಂಪನಿಯ 5,383 ಕೋಟಿ ರುಪಾಯಿ ಅಕ್ರಮ ವಹಿವಾಟು ಪ್ರಕರಣದ ತನಿಖೆಯ ಭಾಗವಾಗಿ ಇಂದು ದಾಳಿ ನಡೆಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.