ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 13 ಲಕ್ಷ ಎಕರೆ ಜಮೀನು ಬಿತ್ತನೆ -ಸಚಿವ ಎಂ.ಬಿ.ಪಾಟೀಲ

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 13 ಲಕ್ಷ ಎಕರೆ ಜಮೀನು ಬಿತ್ತನೆ -ಸಚಿವ ಎಂ.ಬಿ.ಪಾಟೀಲ

ವಿಜಯಪುರ ,ಜೂ.11 :  ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 13 ಲಕ್ಷ ಎಕರೆ ಜಮೀನು ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ 25 ಸಾವಿರ ಕ್ವಿಂಟಲ್‍ನಷ್ಟು ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದರು.

ನಗರದ ಕೃಷಿಕ ಸಮಾಜ ಕಾರ್ಯಾಲಯ ಆವರಣದಲ್ಲಿಂದು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತಾಲೂಕಾ ಕೃಷಿಕ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2017-18ನೇ ಸಾಲಿನ ಸಮಗ್ರ ಕೃಷಿ ಅಭಿಯಾನ-ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತೀವ್ರ ಬರವನ್ನು ಎದುರಿಸಿರುವ ರೈತರು, ತೀವ್ರ ಸಂಕಷ್ಟದಲ್ಲಿದ್ದಾರೆ. ದೇವರ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೈತರ ಉತ್ತಮ ಬೆಳೆಯ ಅನುಕೂಲಕ್ಕಾಗಿ ಈಗಾಗಲೇ ಕೃಷಿ ಇಲಾಖೆ ಮೂಲಕ 25ಸಾವಿರ ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದ್ದು, ಹತ್ತು ಸಾವಿರ ಕ್ವಿಂಟಲ್‍ನಷ್ಟು ಬಿತ್ತನೆ ಬೀಜ ಸಹ ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ದಿಸೆಯಲ್ಲಿ ಜಿಲ್ಲೆಯಾದ್ಯಂತ ಕೃಷಿ ಭಾಗ್ಯ ಯೋಜನೆಯಡಿ 15 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡು ಕೃಷಿ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ 14 ಸಾವಿರ ಸ್ಪ್ರಿಂಕ್ಲರ್ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದ್ದು, ಮುಂಬರುವ ದಿನಗಳಲ್ಲಿ ತೊಗರಿ ಬೆಳೆಯನ್ನು ಹನಿ ನೀರಾವರಿ ಮೂಲಕ ಬೆಳೆಸಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಮುಂಬರುವ ವರ್ಷದಲ್ಲಿ ರೈತರಿಂದ ಇನ್ನೂ ಹೆಚ್ಚಿನ ತೊಗರಿ ಬೆಳೆಯನ್ನು ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ರೈತರ ಅನುಕೂಲಕ್ಕಾಗಿ ಮಣ್ಣು ಆರೋಗ್ಯ ಅಭಿಯಾನ ಸಹ ಜಾರಿಯಲ್ಲಿದೆ. ಈ ಕುರಿತಂತೆ ಜಿಲ್ಲೆಯ 4.25ಲಕ್ಷ ರೈತರಿಗೆ ಮಣ್ಣು ಪರೀಕ್ಷಾ ಕಾರ್ಡ್ ಸಹ ವಿತರಿಸಲಾಗಿದ್ದು, ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಬೆಳೆಯನ್ನು ಬೆಳೆಯಲು ಇದು ಸಹಕಾರಿಯಾಗಿದೆ. ಅದರಂತೆ ಕೃಷಿ ಸಚಿವರ ಆಸಕ್ತಿಯಿಂದ ಸಿರಿಧಾನ್ಯ ಉತ್ತೇಜನಕ್ಕೂ ನೆರವು ಒದಗಿಸಲಾಗಿದೆ. ಅದರಂತೆ ರಸಗೊಬ್ಬರ ಸಹಾಯಧನವನ್ನು ನೇರವಾಗಿ ರೈತರ ಖಾತೆಗೆ ಜಮೆ ಆಗುವ ವ್ಯವಸ್ಥೆ ಸಹ ರೂಪಿಸಲಾಗಿದೆ ಎಂದ ಅವರು, ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ರೈತರು ಪಡೆಯುವುದರ ಜೊತೆಗೆ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಗಮನ ನೀಡಬೇಕು. ರಾಸಾಯನಿಕಯುಕ್ತ ಔಷಧಿ ಸಿಂಪರಣೆ ಬೇಡ ಎಂದ ಅವರು, ಇದರಿಂದ ಮುಂದಿನ ಪೀಳಿಗೆಗೆ ಅಪಾಯವಾಗಲಿರುವ ಹಿನ್ನಲೆಯಲ್ಲಿ ಸಮಗ್ರ ಕೃಷಿ ಪದ್ಧತಿಯ ಜೊತೆಗೆ ಸಾವಯವ ಗೊಬ್ಬರ ಬಳಸುವಂತೆ ಸಲಹೆ ನೀಡಿದರು. 

ರೈತರ ಸಂಕಷ್ಟವನ್ನು ಅರಿತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಹಾಗೂ ನೀರಾವರಿಗೆ ಸಂಬಂಧಪಟ್ಟಂತೆ ರೈತರೊಂದಿಗೆ ಸಂವಾದ ನಡೆಸುವ ಉದ್ದೇಶ ಸಹ ಹೊಂದಿರುವುದಾಗಿ ತಿಳಿಸಿದ ಅವರು, ಮಣ್ಣು ಆರೋಗ್ಯ ಪರೀಕ್ಷೆಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಮಣ್ಣು ಆರೋಗ್ಯ ವಿಧಾನಗಳ ಬಗ್ಗೆ ವರದಿ ರೂಪಿಸಲಾಗಿದ್ದು, ಈ ಕುರಿತಂತೆ 40 ಪ್ರಸ್ತಾವನೆ ಸಹ ಇದ್ದು, ಇವುಗಳನ್ನು ಕೃಷಿ ಇಲಾಖೆಗೆ ಒದಗಿಸಲಾಗುವುದು ಎಂದು ಹೇಳಿದ ಸಚಿವರು, ರಾಜ್ಯದಲ್ಲಿ ಕೃಷಿಯ ಜೊತೆಗೆ ಕೃಷಿ ಪೂರಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. 

ಮಳೆ ಕೋರಿ ಇತ್ತೀಚೆಗೆ ಕೃಷ್ಣೆ ಹಾಗೂ ಕಾವೇರಿ ಉಗಮ ಸ್ಥಾನಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿರುವುದಾಗಿ ತಿಳಿಸಿದ ಅವರು, ಈ ನದಿಗಳು ತಾಯಿ ಸ್ವರೂಪಿಯಾಗಿರುವುದರಿಂದ ಉಪಕಾರ ಸ್ಮರಣೆಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅದರಂತೆ ಭೂತಾಯಿ ಸ್ಮರಣೆಗಾಗಿ ಕಾರಹುಣ್ಣಿಮೆ ಸಂದರ್ಭದಲ್ಲಿ ಚರಗ ಸಲ್ಲಿಸುವ ಪರಂಪರೆ ಇದೆ. ಅದರಂತೆ ಮೂರ್ತಿ ಪೂಜೆ, ಜೀವನದಿಗಳಾದ ಕೃಷ್ಣಾ, ಕಾವೇರಿ, ತುಂಗಭದ್ರೆ ನದಿಗಳಿಗೆ ಪೂಜೆ ಸಲ್ಲಿಸುವಲ್ಲಿ ಯಾವುದೇ ಸಂಕೋಚ ಇಲ್ಲ ಎಂದ ಅವರು, ರೈತರು ತೀವ್ರ ಸಂಕಷ್ಟದಲ್ಲಿರುವುದರಿಂದ ಉತ್ತಮ ಮಳೆ ಬೆಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಸಚಿವರು ಇದೇ ಸಂದರ್ಭದಲ್ಲಿ ಮಣ್ಣು ವಿಶ್ಲೇಷಣೆ ಕಾರ್ಡ್ ವಿತರಿಸಿದರು. ಅದರಂತೆ ರೈತರಿಗೆ ಸಹಾಯಧನ ವಿತರಣೆ ಯಂತ್ರ, ಕೃಷಿ ರಥ ಹಾಗೂ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಬಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಮೇಟಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಕೃಷಿ ಸಮಾಜ ಜಿಲ್ಲಾ ಅಧ್ಯಕ್ಷ ಬಿ.ಎಲ್.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.