ನರೇಗಾ ಕೂಲಿಕಾರ್ಮಿಕರಿಗೆ ಪ್ರಧಾನಿ “ದರ್ಶನ ಭಾಗ್ಯ’

ನರೇಗಾ ಕೂಲಿಕಾರ್ಮಿಕರಿಗೆ ಪ್ರಧಾನಿ “ದರ್ಶನ ಭಾಗ್ಯ’

ಬೆಂಗಳೂರು: ರಾಜ್ಯದ 92 ಹಳ್ಳಿ ಮಂದಿಗೆ ಪ್ರಧಾನಿ ನರೇಂದ್ರ ಮೋದಿ 'ದರ್ಶನಭಾಗ್ಯ' ಸಿಕ್ಕಿದೆ. ದೇಶದ 'ಯಜಮಾನ'ನ್ನು
ಕಾಣುವ ತವಕದಲ್ಲಿರುವ ಈ ಹಳ್ಳಿ ಮಂದಿಯ ತಂಡ ಸೋಮವಾರ (ಅ.9) ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದೆ.

ನಾನಾಜಿ ದೇಶಮುಖ್‌ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅ.10 ಮತ್ತು 11ರಂದು ದೆಹಲಿಯಲ್ಲಿ
'ಜೀವನೋಪಾಯ ಅಭಿವೃದ್ಧಿ ಮತ್ತು ವೈವಿಧಿಕರಣ' ಕುರಿತ ರಾಷ್ಟ್ರ ಮಟ್ಟದ ಸಮಾಲೋಚನೆ ಮತ್ತು ಪ್ರದರ್ಶನ
ನಡೆಯಲಿದೆ. ಇದರಲ್ಲಿ ಅ.11ರಂದು ಪ್ರಧಾನಿ ಮೋದಿಯವರು ದೇಶದ ವಿವಿಧ ರಾಜ್ಯಗಳ ಆಯ್ದ ಪಂಚಾಯಿತಿಗಳ ಅಧ್ಯಕ್ಷರು, ಉದ್ಯೋಗ ಖಾತರಿ, ರಾಷ್ಟ್ರೀಯ ಜೀವನೋಪಾಯ ಮಿಷನ್‌, ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಸೇರಿ ವಿವಿಧ ಯೋಜನೆಗಳ 10 ಸಾವಿರಕ್ಕೂ ಹೆಚ್ಚು ಫ‌ಲಾನುಭವಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಅವರ ಕಾರ್ಯಕ್ಷಮತೆ ಹಾಗೂ ಸಾಧನೆಯನ್ನು ಮಾನದಂಡವಾಗಿಟ್ಟು ಕೊಂಡು ಗ್ರಾಮೀಣಾಭಿವೃದ್ಧಿ ಇಲಾಖೆಯು ಆಯ್ಕೆ ಮಾಡಿರುವ ಆಯ್ದ ಗ್ರಾಮ ಪಂಚಾಯಿಗಳ ಅಧ್ಯಕ್ಷರು ಮತ್ತು ಉದ್ಯೋಗ ಖಾತರಿ ಯೋಜನೆ ಕೂಲಿಕಾರರು ಸೇರಿ 42 ಮಂದಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಯೋಜನೆಯ 42 ಮತ್ತು ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌
ಯೋಜನೆಯ 8 ಮಂದಿ ಫ‌ಲಾನುಭವಿಗಳು ಸೇರಿ ಒಟ್ಟು 92 ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.

ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಮಂಜುನಾಥ್‌ ಅವರನ್ನು ಈ ಎರಡು ದಿನಗಳ ದಿಲ್ಲಿ ಪ್ರವಾಸದ ನೋಡಲ್‌ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಪ್ರವಾಸ ಖರ್ಚು ವೆಚ್ಚಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಭರಿಸಲಿದೆ. ಸೋಮವಾರ (ಅ.9) ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ತೆರಳುವ ಈ ತಂಡ ಅ.12ಕ್ಕೆ ವಾಪಸ್‌ ಆಗಲಿದೆ. ಇದೇ ವೇಳೆ ನಡೆಯಲಿರುವ ಪ್ರದರ್ಶನದಲ್ಲಿ ಪಂಚಾಯಿತಿಗಳ ಆಡಳಿತ ವೈಖರಿ, ಉದ್ಯೋಗ ಖಾತರಿ, ರಾಷ್ಟ್ರೀಯ ಜೀವನೋಪಾಯ, ಗ್ರಾಮೀಣ ಆವಾಸ್‌ ಯೋಜನೆಗಳ ಅನುಷ್ಠಾನದಲ್ಲಿ ದೇಶದ ವಿವಿಧ ರಾಜ್ಯಗಳು ಅಳವಡಿಸಿಕೊಂಡಿರುವ ಅತ್ಯುತ್ತಮ ಮಾದರಿಗಳ ಯಶೋಗಾಥೆ ಇರುತ್ತದೆ. ಇದರಲ್ಲಿ ಗ್ರಾಮೀಣ ಆವಾಸ್‌ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಂಡಿರುವ ಫ‌ಲಾನುಭವಿಗಳ ತಮ್ಮ ಮನೆಯ ಛಾಯಚಿತ್ರ ಪ್ರದರ್ಶಿಸಲಿಕ್ಕೂ  ಅವಕಾಶವಿದೆ.