330 ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

330 ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ನವದೆಹಲಿ,ಮೇ.22: ಅನಿಲ ಸಂಗ್ರಹಾಗಾರದಲ್ಲಿ  ಸೋರಿಕೆಯಾದ ಕಾರಣ ಸಮೀಪದ ಎರಡು ಶಾಲೆಗಳ 300ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ಆಗ್ನೇಯ ದೆಹಲಿಯ ತುಘಲಕಾಬಾದ್‍ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
 ಅಸ್ವಸ್ಥಗೊಂಡವರು `ರಾಣಿ ಝಾನ್ಸಿ ಸ್ಕೂಲ್' ಮತ್ತು ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಅನಿಲ ಸೋರಿಕೆಯಿಂದ ಕಣ್ಣು, ಗಂಟಲಿನ ತುರಿಕೆ ಮತ್ತು ಉಸಿರಾಟದ ತೊಂದರೆ ಉಂಟಾಗಿದ್ದು ಹತ್ತಿರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 `ಅನಿಲ ಸೋರಿಕೆ ಕುರಿತಂತೆ ಬೆಳಿಗ್ಗೆ 7.35ರ ಸುಮಾರಿಗೆ ಮಾಹಿತಿ ಬಂದ ಕೂಡಲೇ 17 ಅಗ್ನಿಶಾಮಕ ದಳದ ವಾಹನಗಳು ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಲಾಯಿತು' ಎಂದು ದೆಹಲಿ ಅಗ್ನಿ ಶಾಮಕ ಘಟಕದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 
 ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ  ದೆಹಲಿ ಸರ್ಕಾರ ಆದೇಶಿಸಿದೆ. `ಪರಿಸರ ರಕ್ಷಣೆ ಕಾಯ್ದೆ' ಮತ್ತು ಭಾರತೀಯ ದಂಡಸಂಹಿತೆ  ಅಡಿ ಪೋಲೀಸರು ಪ್ರಕರಣ  ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 ಘಟನೆ ವರದಿಯಾಗುತ್ತಿದ್ದಂತೆ ಪೋಲೀಸರು ಮತ್ತು ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿದೆ. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರು, `ಮಕ್ಕಳು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅನಿಲ ಸೋರಿಕೆಯಾಗಿರುವ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ' ಎಂದರು. 
 `ತುರ್ತು ನಿಗಾ ಘಟಕದಲ್ಲಿರುವ ಮಕ್ಕಳು ಸೇರಿದಂತೆ ಎಲ್ಲ ಮಕ್ಕಳ ಆರೋಗ್ಯವೂ ಸ್ಥಿರವಾಗಿದ್ದು ಇನ್ನು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 
 42 ವಿದ್ಯಾರ್ಥಿಗಳು ಮತ್ತು ಓರ್ವ ಹಿರಿಯ ವ್ಯಕ್ತಿ ದಾಖಲಾಗಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಪೋಲೊ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.