ಮೋದಿ ಆರ್ಥಿಕ ನೀತಿ ಮೇಲೆ ‘ಸಿಂಹ’ಪ್ರಹಾರ

ಮೋದಿ ಆರ್ಥಿಕ ನೀತಿ ಮೇಲೆ ‘ಸಿಂಹ’ಪ್ರಹಾರ

ನವದೆಹಲಿ,ಸೆ.28: ಕೇಂದ್ರ ಸರ್ಕಾರದ ವಿತ್ತ ನೀತಿಗಳ ಬಗ್ಗೆ ಬಿಜೆಪಿಯಲ್ಲೇ ಅಪಸ್ವರಗಳು ಕೇಳಿಬರಲು ಆರಂಭಿಸಿವೆ. ಆರ್ಥಿಕತೆ 3 ವರ್ಷದ ಕನಿಷ್ಠಕ್ಕೆ ಕುಸಿದ ಬೆನ್ನಲ್ಲೇ ಒಳಬೇಗುದಿ ಸ್ಫೋಟಗೊಳ್ಳತೊಡಗಿದ್ದು, ಬಿಜೆಪಿ ಹಿರಿಯ ನಾಯಕ, ಮಾಜಿ ವಿತ್ತ ಸಚಿವ ಯಶವಂತ ಸಿನ್ಹಾ ಅವರು ಮೋದಿ ಸರ್ಕಾರದ ಆರ್ಥಿಕ ಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನ್ಹಾ ಕಟುನುಡಿ: ‘ಇಂಡಿಯನ್ ಎಕ್ಸ್’ಪ್ರೆಸ್’ನಲ್ಲಿ ಲೇಖನ ಬರೆದಿರುವ ಯಶವಂತ ಸಿನ್ಹಾ, ‘ಇಂದಿನ ಆರ್ಥಿಕ ಸಚಿವರು (ಅರುಣ್ ಜೇಟ್ಲಿ) ಆರ್ಥಿಕ ವ್ಯವಸ್ಥೆ ಗಬ್ಬೇಳುವಂತೆ ಮಾಡಿದ್ದಾರೆ. ‘ಈ ಬಗ್ಗೆ ಬಿಜೆಪಿಗರಲ್ಲೂ ಸಾಕಷ್ಟು ಅತೃಪ್ತಿ ಇದೆ. ಆದರೆ ಬಹಿರಂಗವಾಗಿ ಮಾತನಾಡಿದರೆ ತಮ್ಮ ಮೇಲೆಲ್ಲಿ ಕ್ರಮ ಕೈಗೊಂಡುಬಿಡುತ್ತಾರೋ ಎಂಬ ಭೀತಿಯಿಂದ ಅವರೆಲ್ಲ ಸುಮ್ಮನಿದ್ದಾರೆ’ ಎಂದೂ ಸಿನ್ಹಾ ಹೇಳಿದ್ದಾರೆ.
ಮಜ್ದೂರ್ ಸಂಘ ಸಹಮತ: ಸಿನ್ಹಾ ಹೇಳಿಕೆಗೆ ಸಹಮತ ವ್ಯಕ್ತಪಡಿಸಿರುವ ಆರೆಸ್ಸೆಸ್‌ನ ಕಾರ್ಮಿಕ ಅಂಗಸಂಸ್ಥೆಯಾಗಿರುವ ಭಾರತೀಯ ಮಜ್ದೂರ್ ಸಂಘ, ‘ಈಗಿನ ಆರ್ಥಿಕ ಸುಧಾರಣೆಗಳನ್ನು ಕೂಡಲೇ ನಿಲ್ಲಿಸಬೇಕು. ಉದ್ಯೋಗರಹಿತ ಪ್ರಗತಿ ಧೋರಣೆ ಬಿಡಬೇಕು. ಜನರಿಗೆ ಉದ್ಯೋಗ ದೊರಕುವಂತಾಗುವ ಆರ್ಥಿಕ ಕ್ರಮಗಳನ್ನು ಪ್ರಕಟಿಸಬೇಕು’ ಎಂದು ಒತ್ತಾಯಿಸಿದೆ.
ರಾಹುಲ್, ಚಿದು ಟೀಕೆ: ಸಿನ್ಹಾ ಹೇಳಿಕೆಗೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಹಮತ ವ್ಯಕ್ತಪಡಿಸಿದ್ದಾರೆ. ‘ವಿಮಾನದ ರೆಕ್ಕೆಗಳು ಒಂದೊಂದಾಗಿ ಉದುರತೊಡಗಿವೆ. ಸೀಟ್ ಬೆಲ್ಟು ಕಟ್ಟಿಕೊಂಡು ನಿಮ್ಮ ಜಾಗ ಭದ್ರ ಮಾಡಿಕೊಳ್ಳಿ’ ಎಂದು ಟ್ವೀಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
‘ಬಿಜೆಪಿ ನಾಯಕರಾದ ಸಿನ್ಹಾ ಅವರೇ ಮೋದಿಜಿ ಮತ್ತು ಜೇಟ್ಲಿಜಿ ಆರ್ಥಿಕತೆ ಹಾಳು ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ನಿಮ್ಮವರೇ ಮಾತನಾಡಿದ್ದಾರೆ. ಅಧಿಕಾರದಲ್ಲಿದ್ದವರು ಈಗಲಾದರೂ ಮೌನ ಮುರಿಯಬೇಕು’ ಎಂದು ಚಿದಂಬರಂ ಆಗ್ರಹಿಸಿದ್ದಾರೆ.