ನೋಟು ರದ್ದತಿಯಿಂದ ಕಾಂಗ್ರೆಸ್‌ಗೆ ಹತಾಶೆ: ಶಾಸಕ ಸಿ.ಟಿ. ರವಿ ಟೀಕೆ

ನೋಟು ರದ್ದತಿಯಿಂದ ಕಾಂಗ್ರೆಸ್‌ಗೆ ಹತಾಶೆ: ಶಾಸಕ ಸಿ.ಟಿ. ರವಿ ಟೀಕೆ

ಹಾಸನ,ನ.8: ನೋಟು ರದ್ದು ನಿರ್ಧಾರವನ್ನು ಆರಂಭದಲ್ಲಿ ಸ್ವಾಗತಿಸಿದ್ದ ಕಾಂಗ್ರೆಸ್‌ನವರು ಇಂದು ಕರಾಳ ದಿನ ಆಚರಿಸುತ್ತಿದ್ದಾರೆ. ಇದು ಅವರ ಗೋಸುಂಬೆತನಕ್ಕೆ ಸಾಕ್ಷಿ. ಅವರು ಹತಾಶೆಯಿಂದ‌ ಈ ನಡೆಗೆ ಮುಂದಾಗಿದ್ದಾರೆ ಎಂದು ಶಾಸಕ ಸಿ.ಟಿ. ರವಿ ಟೀಕಿಸಿದರು.

‘ಇದು ಬ್ಲಾಕ್ ಡೇ ಅಲ್ಲ, ಬ್ಲಾಕ್ ಮನಿ ಡೇ. ನೋಟು ನಿಷೇಧವು ಹಣಕಾಸು ಶುದ್ಧೀಕರಣಕ್ಕೆ ಪ್ರಧಾನಿ‌ ನರೇಂದ್ರ ಮೋದಿ‌ ಅವರು ತೆಗೆದುಕೊಂಡ ಐತಿಹಾಸಿಕ ಕ್ರಮ’ ಎಂದು ಅವರು ಬಣ್ಣಿಸಿದರು.

ನೋಟು ರದ್ದತಿಯನ್ನು ದೇಶದ ಜನ ಸ್ವಾಗತಿಸಿದ್ದಾರೆ. ಆದರೆ, ಕಾಂಗ್ರೆಸ್‌ನವರು ರಾಜಕೀಯ ಕಾರಣಕ್ಕೆ ನಾಟಕವಾಡುತ್ತಿದ್ದಾರೆ ಎಂದು ರವಿ ಹೇಳಿದರು.

ಈ ಮಧ್ಯೆ, ಟಿಪ್ಪು ಜಯಂತಿ‌ ತಡೆಗೆ ಹೈಕೋರ್ಟ್ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ನಿಷೇಧ ಮಾಡಲಿದೆ. ಸಂತ ಶಿಶುನಾಳ‌ ಷರೀಫರ ಜಯಂತಿ ಆಚರಣೆ ಮಾಡಲಿದೆ ಎಂದರು.

ಟಿಪ್ಪುವಿನ ಸತ್ಯ ಬಯಲಾಗುವ ಭೀತಿಯಿಂದ ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.