ಡೋಕ್ಲಾಮ್’ನಲ್ಲಿ ಚೀನಾ ಸೇನೆಯ ಜಮಾವಣೆ; ಮತ್ತೆ ಉದ್ವಿಗ್ನ ಸ್ಥಿತಿ

ಡೋಕ್ಲಾಮ್’ನಲ್ಲಿ ಚೀನಾ ಸೇನೆಯ ಜಮಾವಣೆ; ಮತ್ತೆ ಉದ್ವಿಗ್ನ ಸ್ಥಿತಿ

ನವದೆಹಲಿ,ಅ.7:  ಸಿಕ್ಕಿಂ-ಭೂತಾನ್-ಚೀನಾ ಗಡಿಭಾಗದಲ್ಲಿರುವ ವಿವಾದಿತ ಡೋಕ್ಲಾಮ್ ಪ್ರದೇಶದಲ್ಲಿ ಭಾರತದ ಆಕ್ಷೇಪದ ಹೊರತಾಗ್ಯೂ ಚೀನಾ ನಿಧಾನವಾಗಿ ತನ್ನ ಸೇನಾ ಬಲ ಹೆಚ್ಚಿಸಿಕೊಳ್ಳುತ್ತಿದೆಎಂದು ತಿಳಿದುಬಂದಿದೆ.

ಇತ್ತೀಚೆಗೆ ಭಾರತೀಯ ಸೇನೆಯು ಡೋಕ್ಲಾಮ್ ಪ್ರದೇಶದಲ್ಲಿ ಬೀಡು ಬಿಟ್ಟು ಚೀನಾ ಕಣ್ಣನ್ನು ಕೆಂಪಗಾಗಿಸಿತ್ತು. ಚೀನಾ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿ ಭಾರತ ಸೇನೆ ಇಲ್ಲಿಗೆ ನುಗ್ಗಿ 73 ದಿನ ಬೀಡು ಬಿಟ್ಟಿತ್ತು.

ಆದರೆ ಈಗ ವಿವಾದಿತ ಸ್ಥಳದಿಂದ ೧೨ ಕಿ.ಮೀ. ದೂರದಲ್ಲಿ ಪುನಃ ರಸ್ತೆ ಕಾಮಗಾರಿ ಆರಂಭಿಸಿರುವ ಚೀನಾ, ನಿಧಾನವಾಗಿ ತನ್ನ ಸೇನಾ ಬಲವನ್ನೂ ಇಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ವಿವಾದಿತ ಸ್ಥಳದಲ್ಲಿ ಚೀನಾದ 1000 ಸೈನಿಕರು ಬೀಡುಬಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೀಗಾಗಿ ಇದು ಉಭಯ ದೇಶಗಳ ನಡುವೆ ಹೊಸ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಭಾರತದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಚಲ್ ಬಿ.ಎಸ್. ಧನೋವಾ ಗುರುವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಡೋಕ್ಲಾಮ್ ಪ್ರಸ್ಥಭೂಮಿಯ ಚುಂಬಿ ಕಣಿವೆಯಲ್ಲಿ ಚೀನಾ ಪಡೆಗಳು ಇನ್ನೂ ಬೀಡುಬಿಟ್ಟಿವೆ’ ಎಂದು ಖಚಿತಪಡಿಸಿದ್ದಾರೆ.

ಆದರೆ, ‘ಈ ಪ್ರದೇಶದಲ್ಲಿನ ಅಭ್ಯಾಸ ಮುಗಿದ ನಂತರ ಈ ಪಡೆಗಳು ವಾಪಸಾಗುವ ನಿರೀಕ್ಷೆ ಇದೆ. ಉಭಯ ಪಡೆಗಳು ಈಗ ಮುಖಾಮುಖಿಯಾಗುವ ಇರಾದೆ ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ  ಹೋಗುವಾಗ ಹುಷಾರ್: ಪ್ರವಾಸಿಗರಿಗೆ ಚೀನಾ ಎಚ್ಚರಿಕೆ

ಭಾರತಕ್ಕೆ ತೆರಳುವ ತನ್ನ ನಾಗರಿಕರಿಗೆ ಚೀನಾ ಹೊಸದಾಗಿ ಎಚ್ಚರಿಕೆ ನೀಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸೇರಿದಂತೆ ಕೆಲ ಪ್ರದೇಶಗಳಿಗೆ ವಿದೇಶಿಯರಿಗೆ ಪ್ರವೇಶ ಇಲ್ಲ. ಹೀಗಾಗಿ ಇಂಥ ಪ್ರದೇಶಗಳಿಗೆ ತೆರಳುವ ಮುನ್ನ ತನ್ನ ನಾಗರಿಕರು ಎಚ್ಚರದಿಂದ ಇರಬೇಕೆಂದು ಚೀನಾ ಸಲಹೆ ನೀಡಿದೆ. ಡೋಕ್ಲಾಮ್ ವಿವಾದ ಇತ್ಯರ್ಥ ಬಳಿಕ ಚೀನಾ ಹೊರಡಿಸಿದ ಮೊದಲ ಎಚ್ಚರಿಕೆ ಇದು.