ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ

ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ

ಬಾಗಲಕೋಟೆ ಸೆ, 08 : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಶು ಅಭಿವೃದ್ದಿ ಯೋಜನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಇಲಾಖೆ ಸಹಯೋಗದಲ್ಲಿ ತಾ.ಪಂ ಸಭಾಭವನದಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಬ್ದುಲ್‍ರಹೀನ್ ಹುಸೇನ ಶೇಖ್ ಅವರು ಗರ್ಭಿಣಿ ಸ್ತ್ರೀಯರು ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯದ ಕಡೆ ಗಮನಹರಿಸಬೇಕು. ಸಮಾಜಕ್ಕೆ ಆರೋಗ್ಯ ಮಗುವನ್ನು ಕೊಟ್ಟು ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.
    ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ ಮಾತನಾಡಿ ಅಕ್ಟೋಬರ 2 ರಿಂದ ಪ್ರಾರಂಭವಾಗುವ ಮಾತೃ ಪೂರ್ಣ ಯೋಜನೆಯಲ್ಲಿ ಗರ್ಭಿಣಿ, ಬಾಣಂತಿ ಹಾಗೂ ಜನಿಸುವ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕಭರಿತ ಬಿಸಿ ಊಟ ಕೊಡುವ ಕುರಿತು ವಿವರವಾಗಿ ತಿಳಿಸಿದರು. ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆ ಬಗ್ಗೆ ತಿಳಿಸಿದರು. 
    ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ ವೇಷಭೂಷಣದಲ್ಲಿ ಎಷ್ಟೇ ಫ್ಯಾಶನ್ ಬಂದರೂ ಬರಲಿ ಆದರೆ ನಾವು ಸೇವಿಸುವಂತಹ ಆಹಾರದಲ್ಲಿ ಫ್ಯಾಶನ್ ಇರಬಾರದು. ಇದು ನಮ್ಮ ದೇಹದ ಮೇಲೆ ದುಷ್ಪಪರಿಣಾಮ ಬೀರುತ್ತದೆ. ಇದರ ಬಗ್ಗೆ ಎಚ್ಚರ ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಸರಕಾರದ ಸೇವೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದರು.
    ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಬಿ.ಸಿ.ಪವಾಡೆಪ್ಪ ಅತಿಥಿ ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ ತಳವಾರ ಮಾತನಾಡಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ನಿರ್ಮಲಾ ಸುರುಪುರ  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೆ.ವಾಯ್.ಉಕ್ಕಲಿ ವಂದಿಸಿದರು. ಮೇಲ್ವಿಚಾರಕಿ ಲಕ್ಷ್ಮೀ ನ್ಯಾಮಗೌಡರ ನಿರೂಪಿಸಿದರು.