ಪದ್ಮಾವತಿ ಸಿನಿಮಾ ಬಿಡುಗಡೆಗೆ ವಿರೋಧ- ಬೆಂಗ್ಳೂರಲ್ಲಿ ನಾಳೆ ಪ್ರತಿಭಟನೆ

ಪದ್ಮಾವತಿ ಸಿನಿಮಾ ಬಿಡುಗಡೆಗೆ ವಿರೋಧ- ಬೆಂಗ್ಳೂರಲ್ಲಿ ನಾಳೆ ಪ್ರತಿಭಟನೆ

ಬೆಂಗಳೂರು,14: ಪದ್ಮಾವತಿ ಸಿನಿಮಾ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬೆಂಗಳೂರಿಗೂ ವ್ಯಾಪಿಸಿದೆ. ಸಿನಿಮಾದಲ್ಲಿ ಇತಿಹಾಸವನ್ನು ತಿರುಚಿ ಅವಮಾನ ಮಾಡಲಾಗಿದೆ ಎಂದು ರಜಪೂತ ಸಮುದಾಯ ಆರೋಪಿಸಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ರಾಜ್ಯಗಳಲ್ಲಿ ಪದ್ಮಾವತಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡದಂತೆ ಬಿಜೆಪಿ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

ರಾಜಸ್ಥಾನದಲ್ಲಿರುವ ಕೋಟ್ಯಾಂತರ ಹಿಂದೂಗಳಿಗೆ ರಾಣಿ ಪದ್ಮಾವತಿ ಶೌರ್ಯ, ಧೈರ್ಯ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳಿಗೆ ಹೆಸರಾಗಿದ್ದಾರೆ. ಸಿನಿಮಾದಲ್ಲಿ ರಾಣಿ ಪದ್ಮಾವತಿಯನ್ನು ಅವಮಾನ ಮಾಡುವ ರೀತಿಯಲ್ಲಿ ತೋರಿಸಲಾಗುತ್ತದೆ. ಹಿಂದೂ ಸಮುದಾಯದ ರಾಜಾ- ರಾಣಿಯರನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುವುದು ನಾವು ಒಪ್ಪುವುದಿಲ್ಲ ಮತ್ತು ಇದನ್ನು ಖಂಡಿಸುತ್ತೇವೆ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ರಾಷ್ಟ್ರೀಯ ರಜಪೂತ ಕರ್ಣಿಸೇನೆ ಬುಧವಾರ ಪ್ರತಿಭಟನೆಗೆ ಮುಂದಾಗಿದೆ. ಬುಧವಾರ ಬೆಳಗ್ಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್‍ವರೆಗೆ ಮೆರವಣಿಗೆ ನಡೆಸಲಿದ್ದಾರೆ.

ಪದ್ಮಾವತಿ ಸಿನಿಮಾ ಒಂದು ಐತಿಹಾಸಿಕ ಸಿನಿಮಾ. ಈ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ನಟಿಸಿದ್ದರೆ, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ರಣ್‍ವೀರ್ ಸಿಂಗ್ ಈ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.