14 ವರ್ಷಗಳ ನಂತರ ಅಂಬರೀಶ್‌-ಸುಹಾಸಿನಿ ನಟನೆ!

14 ವರ್ಷಗಳ ನಂತರ ಅಂಬರೀಶ್‌-ಸುಹಾಸಿನಿ ನಟನೆ!

ಬೆಂಗಳೂರು, ನ. 11: ಸುಹಾಸಿನಿ ಅವರು ಡಾ. ವಿಷ್ಣುವರ್ಧನ್‌ ಜೊತೆಗೆ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅಂಬರೀಶ್‌ ಜೊತೆಗೆ ನಟಿಸಿದ್ದು ಕಡಿಮೆಯೇ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಬ್ಬರೂ 'ಬಂಧನ'ದಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಅದಾಗಿ ಸುಮಾರು 20 ವರ್ಷಗಳ ನಂತರ ಅವರಿಬ್ಬರು 'ಅಣ್ಣಾವ್ರು' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.

'ಅಣ್ಣಾವ್ರು' ನಂತರ ಅಂಬರೀಶ್‌-ಸುಹಾಸಿನಿ 14 ವರ್ಷಗಳ ನಂತರ ಮತ್ತೂಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಹೌದು, ಅಂಬರೀಶ್‌ ಮತ್ತು ಸುಹಾಸಿನಿ ನಾಯಕ-ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ಹೆಸರು 'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ. ತಮಿಳಿನ 'ಪವರ್‌ ಪಾಂಡಿ' ಚಿತ್ರದ ರೀಮೇಕ್‌ ಇದು. ಮೂಲ ಚಿತ್ರದಲ್ಲಿ ರಾಜ್‌ಕಿರಣ್‌ ಮತ್ತು ರೇವತಿ ನಟಿಸಿದ್ದರು.

ಕನ್ನಡದಲ್ಲಿ ಅವರಿಬ್ಬರ ಪಾತ್ರವನ್ನು ಅಂಬರೀಶ್‌ ಮತ್ತು ಸುಹಾಸಿನಿ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಅಂಬರೀಶ್‌ ಅವರ ಚಿಕ್ಕ ವಯಸ್ಸಿನ ಪಾತ್ರವನ್ನು ಸುದೀಪ್‌ ಮಾಡುತ್ತಿದ್ದು, ಅವರಿಗೆ ನಾಯಕಿಯ ಹುಡುಕಾಟ ನಡೆಯುತ್ತಿದೆ. 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರವು ಕಿಚ್ಚ ಕ್ರಿಯೇಷನ್ಸ್‌ನಡಿ ನಿರ್ಮಾಣವಾಗುತ್ತಿದ್ದು, ಜಾಕ್‌ ಮಂಜು ನಿರ್ಮಿಸುತ್ತಿದ್ದಾರೆ.

ಇನ್ನು ಸುದೀಪ್‌ ಅವರ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಗುರುದತ್‌ ಗಾಣಿಗ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದರೆ, ಕಿರಣ್‌ ಸಂಕಲನ ಮಾಡುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರೀಕರಣ ಪ್ರಾರಂಭವಾಗಲಿದೆ.