ಗಾನಕೋಗಿಲೆ ಗೀಗಿ ಪದದ ಆಗರ : ಫಕ್ಕೀರವ್ವಾ ಗುಡಿಸಾಗರ

ಗಾನಕೋಗಿಲೆ ಗೀಗಿ ಪದದ ಆಗರ : ಫಕ್ಕೀರವ್ವಾ ಗುಡಿಸಾಗರ

ವಿಜಯಪುರ, ಜೂ.15: ಕಂಚಿನ ಕಂಠದ ಹಾಡುಗಾರ್ತಿ ಎಂದೇ ಖ್ಯಾತಿಯಾದ ಫಕ್ಕೀರವ್ವಾ ಗುಡಿಸಾಗರ ಕೈಯಲ್ಲಿ ದಪ್ಪು ಹಿಡಿದು ಎತ್ತರ ದನಿಯಲ್ಲಿ ಗೀಗಿ ಪದ ಹಾಡುತ್ತಿದ್ದರೆ ಎಂಥವರೂ ಕೂಡಾ ಮನಸ್ಸೋಲುತ್ತಿದ್ದರು. ಕೇಳುಗರ ಮನಸ್ಸಿಗೆ ಆನಂದವಾಗುತ್ತಿತ್ತು. ಫಕ್ಕೀರವ್ವನ ಹಾಡು ಇನ್ನೂ ಕೇಳಬೇಕು ಅನಿಸುತ್ತಿತ್ತು. ಫಕ್ಕೀರವ್ವ ತನ್ನಷ್ಟಕ್ಕೆ ತಾನೇ ಸೈ ಎನಿಸದೇ ಗುರು ಶಿಷ್ಯ ಪರಂಪರೆಯ ವಿಶೆಷ ಘಟಕ ಯೊಜನೆಯಡಿ ನವಲಗುಂದ ತಾಲೂಕಿನ ಬೆಳವಟಿಗಿ ಗ್ರಾಮದಲ್ಲಿ ಶೇಖಪ್ಪ ಹುಚ್ಚಣ್ಣವರ ಹಾಗೂ ಶ್ರೀಮತಿ ಸಾವಿತ್ರಿ ಪೂಜಾರ ಎಂಬುವವರನ್ನು ತನ್ನ ಗರಡಿಯಲ್ಲಿ ತಯಾರು ಮಾಡಿ ಹಾಡಲಿಕ್ಕೆ ಹಚ್ಚಿದವಳು.

ರಾಜ್ಯದ ಯಾವ ಮೂಲೆಯಲ್ಲಿ ಫಕ್ಕೀರವ್ವ ಎಂದರೆ ಸಾಕು ತಟ್ಟನೆ ಗೀಗಿ ಪದ ಹಾಡುವ ಅಮ್ಮ ಎಂದು ಹೇಳುವರು. ಅದರಂತೆ ಗೀಗಿ ಪದ ಹಾಡುವ ಕಲಾವಿದರು ಫಕ್ಕೀರವ್ವನಂತೆ ಹೆಸರು ಉಳಿಸಿಕೊಳ್ಳಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತೆ ಫಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘ(ರಿ) ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಜಾನಪದ ಕಲಾಮೇಳದ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿದರು. 

ಸಾನಿಧ್ಯವಹಿಸಿದ ಮನಸೂರು ರೇವಣಸಿದ್ಧೇಶ್ವರ ಮಠದ ಶ್ರೀ ಬಸವರಾಜ ದೇವರು ಮಾತನಾಡಿ ನಮ್ಮ ಗ್ರಾಮೀಣ ಕಲಾವಿದರಿಗೆ ಸರಕಾರದಿಂದ ವಸತಿ, ಉಚಿತ ಬಸ್‍ಪಾಸ್, ಆರೋಗ್ಯ ಭತ್ಯೆ, ಕಾರ್ಯಕ್ರಮಕ್ಕೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಬೇಕು. ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳು ನೇರವಾಗಿ ಎಲ್ಲ ಕಲಾವಿದರಿಗೆ ಮುಟ್ಟಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ವೀರಭದ್ರಪ್ಪ ಹಾಲಹರವಿ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವ ಮಾಶಾಸನ ಈಗಿರುವ ಮಾಶಾಸನಕ್ಕಿಂತ ಎರಡು ಪಟ್ಟು ಹೆಚ್ಚಾಗಬೇಕೆಂದರು. ಅಂದರೆ ಕಲಾವಿದರಿಗೆ ಅನುಕೂಲವಾಗುವುದು ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮದೇ ಆದ ಜಾನಪದ ಶೈಲಿಯ ಕಲಾ ಪ್ರಕಾರಗಳು ಮುಖ್ಯ ವಾಹಿನಿಯಲ್ಲಿ ಮಿಂಚುತ್ತಿದ್ದು ಅದರಂತೆ ನಮ್ಮ ಜಾನಪದ ಕಲಾ ಪ್ರಕಾರಗಳು ಮುಖ್ಯ ವಾಹಿಸಿನಿಯಲ್ಲಿ ಬರಬೇಕು ಮತ್ತು ಕಲಾವಿದರು ಕಲೆಯನ್ನು ಉಳಿಸಿ ಬೆಳೆಸಬೇಕು. ಕಲಾವಿದ ಉಳಿದರೆ ಕಲೆ ಉಳಿಯುವುದು ಎಂದರು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಮಯ ಟಿ.ವಿ. ವರದಿಗಾರರಾದ  ವೆಂಕನಗೌಡ ಪಾಟೀಲ ಮಾತನಾಡಿ ಕಲಾವಿದರು ಒಂದೇ ಎನ್ನುವ ಅಧಿಕಾರಿಗಳು ಎರಡು ರೀತಿಯಲ್ಲಿ ನೋಡುವುದನ್ನು ನಿಲ್ಲಿಸಬೇಕು. ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ, ಕರ್ನಾಟಕಿ ಸಂಗೀತ ಈ ಕಲೆಗಳಿಗೆ ಶಿಷ್ಟ ಕಲೆ ಎನ್ನುವರು. ಇಂಥಹ ಕಲಾವಿದರಿಗೆ ಹೆಚ್ಚು ಸಂಭಾವನೆಯನ್ನು ನೀಡಿ ಗೌರವದಿಂದ ಕಾಣುತ್ತಾರೆ. ಆದರೆ ಜಾನಪದ ಕಲೆಯನ್ನು ಕೀಳು ರೀತಿಯಲ್ಲಿ ನೋಡುವುದನ್ನು ನಿಲ್ಲಿಸಬೇಕು. ಜಾನಪದ ಕಲಾವಿದರು ಬಿಸಿಲು, ಮಳೆ ಎನ್ನದೇ ತಮ್ಮ ವಾದ್ಯಗಳನ್ನು ನುಡಿಸುತ್ತಾ ಊರು ಸುತ್ತುತ್ತಾ ಕೇರಿ ಓಣಿಗಳಲ್ಲಿ ಮೆರಗು ತರುವಂಥವರು.

ಇಂಥ ಕಲಾವಿದರಿಗೆ ಸರಿಯಾಗಿ ಊಟ ತಿಂಡಿ ನೀಡದೇ ಅಲಕ್ಷ್ಯವಾಗಿ ನೋಡುವದನ್ನು ಬಿಟ್ಟು ಗೌರವದಿಂದ ಕಾಣಬೇಕು ಎಂದು ಹೇಳಿದರು. ಅತಿಥಿಯಾಗಿ ಡಾ. ಶಶಿಧರ ನರೇಂದ್ರ, ಮರಿಶ ನಾಗಣ್ಣವರ, ಮೋಹನ ನಾಗಮ್ಮನವರ, ಮಹದೇವ ದೊಡ್ಡಮನಿ, ಚನ್ನವ್ವ ಹರಿಜನ, ಅರ್ಜುನ ಮಾದರ, ಕಲ್ಲಪ್ಪ ಹಂಚಿನಮನಿ, ಶಂಕರ ಮಾದರ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಯಕ್ಕೇರಪ್ಪ ನಡುವಿನಮನಿ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಜಾನಪದ ಕಲಾ ತಂಡಗಳಿಂದ ಕಾರ್ಯಕ್ರಮ ನಡೆದವು.