ಮನೆಯ ಕಥೆಗಳೇ ‘ಪ್ರಹಸನ’ ಎಂಬ ರಂಗ ಪ್ರಕಾರಕ್ಕೆ ಆಕರಗಳು

ಮನೆಯ ಕಥೆಗಳೇ ‘ಪ್ರಹಸನ’ ಎಂಬ ರಂಗ ಪ್ರಕಾರಕ್ಕೆ ಆಕರಗಳು

ಧಾರವಾಡ ಜೂ.16:  ನಮ್ಮ ಹೆಣ್ಣು ಮಕ್ಕಳು ಮನೆ ಮಾರು ನಡೆಸುವಲ್ಲಿ ಪ್ರಧಾನ ಸ್ಥಾನದಲ್ಲಿರುವವರು. ಮಹಿಳೆಯರಿಗೆ ಅನುಭವದ ಆಗರವೇ ಇರುವುದರಿಂದ ಕಲೆ, ಸಂಸ್ಕøತಿ, ಸಾಹಿತ್ಯ, ಜಾನಪದ ಹಾಡುಗಾರಿಕೆಯನ್ನು ಬೆಳೆಸಲು ಅವರ ಪಾತ್ರ ಅಪಾರವಾದುದು. ಮನೆಯ ಕಥೆಗಳೇ ‘ಪ್ರಹಸನ ಎಂಬ ರಂಗ ಪ್ರಕಾರಕ್ಕೆ ಆಕರಗಳು ಎಂದು ಧಾರವಾಡ ರಂಗಾಯಣ ಆಡಳಿತಾಧಿಕಾರಿ ಬಸವರಾಜ ಹೂಗಾರ ಹೇಳಿದರು.

 ಕರ್ನಾಟಕ ವಿದ್ಯಾವರ್ಧಕ ಮಹಿಳಾ ಮಂಟಪವು ಹುಬ್ಬಳ್ಳಿ ಧಾರವಾಡ ಮಹಿಳಾ ಮಂಡಳಗಳಿಗಾಗಿ ಆಯೋಜಿಸಿದ್ದ ‘ಪ್ರಹಸನ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಅವರು ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡಿದ ಬಸವರಾಜ ಹೂಗಾರ ಅವರು ಕರ್ನಾಟಕ ರಂಗಭೂಮಿ ಕ್ಷೇತ್ರದಲ್ಲಿ ಕಿರು ನಾಟಕಗಳು, ಪ್ರಹಸನಗಳು ಇತ್ತಿತ್ತಲಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಪ್ರದರ್ಶನಗೊಳ್ಳುವುದು ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾಲೇಜಿನ ನೂತನ ಪ್ರಾಂಶುಪಾಲರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ಅವರು ಮಾತನಾಡಿ, ಮಹಿಳಾ ಮಂಡಳದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತನ್ನ ಕಾರ್ಯ ನಿರ್ವಹಿಸುವಲ್ಲಿ ಮಂಚೂಣಿಯಲ್ಲಿದ್ದಾರೆ. ಇಂಥ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಲೆ ಆಸ್ವಾದಿಸುವುದು ನನಗೆ ಸಂತೋಷ ತಂದಿದೆ. ಈಗ ಕರ್ನಾಟಕ ಮಹಾವಿದ್ಯಾಲಯ 100 ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ 127 ವರ್ಷ ಪೂರೈಸಿರುವ ಕರ್ನಾಟಕ ವಿದ್ಯಾವರ್ಧಕ ಸಂಘದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಪ್ರಹಸನ ಸ್ಪರ್ಧೆಯಲ್ಲಿ ಸುಮಾರು 13 ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಅವುಗಳಲ್ಲಿ ಪ್ರಥಮ ಸ್ಥಾನವನ್ನು ಭಾರತಿನಗರ ಮಹಿಳಾ ಮಂಡಳ, ದ್ವಿತೀಯ ಸ್ಥಾನವನ್ನು ಕಸ್ತೂರಬಾ ಮಹಿಳಾ ಮಂಡಳ, ತೃತೀಯ ಸ್ಥಾನವನ್ನು ಗೌರಿ ಮಹಿಳಾ ಮಂಡಳ ಹಾಗೂ ಸಮಾಧಾನಕರ ಬಹುಮಾನವನ್ನು ಸ್ನೇಹ ಬಳಗ, ಮಂಜುನಾಥ ಮಹಿಳಾ ಕೂಟ ಮತ್ತು ಶ್ರೀದೇವಿ ಮಹಿಳಾ ಮಂಡಳ ಪ್ರಶಸ್ತಿಯನ್ನು ಹಂಚಿಕೊಂಡವು. 

ನಾಟಕ ರಚನೆಯಲ್ಲಿ ಪ್ರಥಮ ಸ್ಥಾನವನ್ನು ಯೋಗಮಿತ್ರ ಮಹಿಳಾ ಮಂಡಳ ಪಡೆದರೆ, ದ್ವಿತೀಯ ಸ್ಥಾನವನ್ನು ಶಾರದಾ ಭಜನಾ ಮಂಡಳ, ತೃತೀಯ ಸ್ಥಾನವನ್ನು ಗೀತಾ ಭಜನಾ ಮಂಡಳ ಪಡೆದುಕೊಂಡವು. ಸಮಾಧಾನಕರ ಬಹುಮಾನವನ್ನು ಮಂಜುನಾಥ ಮಹಿಳಾ ಕೂಟ ಪಡೆದುಕೊಂಡವು. ಸ್ಪರ್ಧೆಯಲ್ಲಿ ರಾಣಿ ಚೆನ್ನಮ್ಮ ಮಹಿಳಾ ಮಂಡಳ, ವಿಠಲ ಭಜನಾ ಮಂಡಳ ಹಾಗೂ ಕಲ್ಪತರು ಮಹಿಳಾ ಮಂಡಳಗಳು ಭಾಗವಹಿಸಿದ್ದರು. 

ವೇದಿಕೆ ಮೇಲೆ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ನಾಗಮ್ಮನವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಕಲಾವಿದ ಪ್ರಭು ಹಂಚಿನಾಳ, ಸುನಂದಾ ನಿಂಬನಗೌಡರ ಹಾಗೂ ಸಿದ್ಧರಾಮ ಹಿಪ್ಪರಗಿ ಆಗಮಿಸಿದ್ದರು. 

ಪ್ರಾರಂಭದಲ್ಲಿ ಪ್ರಭಾ ನೀರಲಗಿ ಹಾಗೂ ತಂಡದವರು ಪ್ರಾರ್ಥಿಸಿದರು. ಮಹಿಳಾ ಮಂಟಪದ ಸಂಚಾಲಕರಾದ  ವಿಶ್ವೇಶ್ವರಿ ಬ. ಹಿರೇಮಠ ಅತಿಥಿಗಳನ್ನ ಪರಿಚಯಿಸಿದರು. ಆರತಿ ಪಾಟೀಲ ವಂದಿಸಿದರು. ಹೇಮಾಕ್ಷಿ ಕಿರೇಸೂರ ಕಾರ್ಯಕ್ರಮ ನಿರ್ವಹಿಸಿದರು. 

ಕಾರ್ಯಕ್ರಮದಲ್ಲಿ ಮಹಿಳಾ ಮಂಟಪದ ಸಲಹಾ ಸಮಿತಿ ಸದಸ್ಯರಾದ ಮೇಘಾ ಹುಕ್ಕೇರಿ, ಜಯಶ್ರೀ ಗೌಳಿ, ಪಾರ್ವತಿ ಹಾಲಭಾವಿ, ಮುಕ್ತಾ ಸವಡಿ, ಇಸಬೆಲ್ಲಾ ಝೇವಿಯರ್ ಪಾಲ್ಗೊಂಡಿದ್ದರು.