ಸರಕಾರಿ ಶಾಲೆಗಳೆಂದರೆ ಪಾಲಕರಿಗೆ ಮತ್ತು ಮಕ್ಕಳಿಗೆ ಕೂಡಾ ಅಲರ್ಜಿ

 ಸರಕಾರಿ ಶಾಲೆಗಳೆಂದರೆ ಪಾಲಕರಿಗೆ ಮತ್ತು ಮಕ್ಕಳಿಗೆ ಕೂಡಾ ಅಲರ್ಜಿ

ವಿಜಯಪುರ ಜೂ.15:ಇಂದಿನ ಕಾಲದಲ್ಲಿ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಎಲ್ಲರೂ ಪೈಪೋಟಿಗೆ ಬಿದ್ದಂತೆ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯಲು ಹಾತೊರೆಯುತ್ತಾರೆ. ಇಂದು ಪ್ರತಿ ಊರಿನಲ್ಲಿಯೂ ಕಾನ್ವೆಂಟ್ ಮಾದರಿ ಶಾಲೆಗಳು ಪ್ರಾರಂಭವಾಗಿದ್ದು, ಸರಕಾರಿ ಶಾಲೆಗಳೆಂದರೆ ಪಾಲಕರಿಗೆ ಮತ್ತು ಮಕ್ಕಳಿಗೆ ಕೂಡಾ ಅಲರ್ಜಿ. ಆದರೆ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಹಣಮಸಾಗರ ಸರಕಾರಿ ಪ್ರಾಥಮಿಕ ಶಾಲೆಗೆ, ಖಾಸಗಿ ಶಾಲೆಗಳಿಂದ ವಿದ್ಯಾರ್ಥಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಈ ಸರಕಾರಿ ಶಾಲೆಗೆ ಪ್ರವೇಶ ಪಡೆಯುತ್ತಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 100 ವಿದ್ಯಾರ್ಥಿಗಳು ಗ್ರಾಮದ ಸುತ್ತಮುತ್ತಲಿನ ಖಾಸಗಿ ಶಾಲೆಗಳನ್ನು ತೊರೆದು, ಹಣಮಸಾಗರದ ಸರಕಾರಿ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುತ್ತಿದ್ದು, ಈ ವಿದ್ಯಾರ್ಥಿಗಳನ್ನು ಖುದ್ದು ಈ ಭಾಗದ ಶಾಸಕರು, ಜಲಸಂಪನ್ಮೂಲ ಸಚಿವರಾಗಿರುವ ಡಾ.ಎಂ.ಬಿ.ಪಾಟೀಲರವರು ಸರಕಾರದ ಪರವಾಗಿ ಸ್ವಾಗತಿಸುತ್ತಿದ್ದಾರೆ. ದಿ.17 ಶನಿವಾರರಂದು ಬೆ.9.30ಗಂ. ನಡೆಯುವ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಸಚಿವರು ಆಗಮಿಸುತ್ತಿರುವುದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಗ್ರಾಮಸ್ಥರೆ ಸ್ವಯಂಸ್ಪೂರ್ತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದು, ವೇದಿಕೆ, ಭೋಜನ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಗ್ರಾಮಸ್ಥರೆ ಮಾಡುತ್ತಿದ್ದು, ಇಡೀ ರಾಜ್ಯದಲ್ಲಿಯೇ ಇದು ವಿಶಿಷ್ಠ ಕಾರ್ಯಕ್ರಮ ಎಂದು ಬುಧವಾರ ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ.ಬೆಳ್ಳೆಣ್ಣವರ ತಿಳಿಸಿದ್ದಾರೆ.

ಹಣಮಸಾಗರ ಗ್ರಾಮದ ನೇತಾಜಿ ಸುಭಾಷಚಂದ್ರ ಭೋಸ್ ಹಾಗೂ ಗಜಾನನ ತರುಣ ಸಂಘದ ಸದಸ್ಯರ ನೇತೃತ್ವದಲ್ಲಿ ಮೂಲತಃ ಇದೇ ಊರಿನವರಾಗಿದ್ದು, ಬೇರೆಡೆಗೆ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವವರು, ಸೇರಿದಂತೆ ಗ್ರಾಮಸ್ಥರೆಲ್ಲರೂ ಸೇರಿ ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಾರೆ ಎನ್ನುವುದು ಕೇವಲ ಭ್ರಮೆ, ನಾವು ಸರಕಾರಿ ಶಾಲೆಗಳಲ್ಲಿಯೇ ಅತ್ಯುನ್ನತ ಶಿಕ್ಷಣ ನೀಡಬಹುದು ಎಂಬುದನ್ನು ತೋರಿಸಲು ನಮ್ಮ ಮಕ್ಕಳನ್ನು ನಮ್ಮ ಗ್ರಾಮದ ಸರಕಾರಿ ಶಾಲೆಗೆ ಸೇರಿಸುತ್ತಿದ್ದೇವೆ ಎಂದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಈ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಲಿದೆ.