ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಶೇ 50ರಷ್ಟು ಸೀಟು ಕನ್ನಡಿಗರಿಗೆ ನೀಡಲು ಮಸೂದೆ ಮಂಡನೆ

ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಶೇ 50ರಷ್ಟು ಸೀಟು ಕನ್ನಡಿಗರಿಗೆ ನೀಡಲು ಮಸೂದೆ ಮಂಡನೆ

ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ  ಶೇ 50ರಷ್ಟು ಸೀಟುಗಳನ್ನು ಕನ್ನಡಿಗರಿಗೆ ಮೀಸಲಿಡುವ ಸಂಬಂಧ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು. ವೈದ್ಯಕೀಯ ಕೋರ್ಸ್‌ಗಳಿಗೆ ಇದುವರೆಗೆ ನಡೆಯುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಬದಲಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸಲು ಅವಕಾಶ ನೀಡಲಾಗಿದೆ. 

ಎನ್‌ಇಇಟಿ ಮೆರಿಟ್‌ ಆಧಾರದ ಮೇಲೆ ರಾಜ್ಯಕ್ಕೆ ಲಭ್ಯವಾಗುವ ಒಟ್ಟು ಸೀಟುಗಳಲ್ಲಿ  ಶೇ 50ರಷ್ಟನ್ನು ಕನ್ನಡಿಗರಿಗೆ ಮತ್ತು ಉಳಿದ ಶೇ 50ರಷ್ಟು ಸೀಟುಗಳನ್ನು ಅಖಿಲ ಭಾರತ ಕೋಟಾಕ್ಕೆ ನೀಡಲು ಈ ಮಸೂದೆ ಅವಕಾಶ ಕಲ್ಪಿಸಲಿದೆ. ಇದಲ್ಲದೆ, ಸರ್ಕಾರಿ, ಖಾಸಗಿ, ಡೀಮ್ಡ್‌ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸೀಟುಗಳ ಭರ್ತಿಗೆ ಎನ್‌ಇಇಟಿಯ ಮೆರಿಟ್‌ ಆಧಾರದ ಮೇಲೆ ಕೇಂದ್ರೀಕೃತ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.