ಶಿಕ್ಷಕರಿಂದಲೇ ಸಮಾಜ ಪರಿವರ್ತನೆ ಸಾಧ್ಯ

ಶಿಕ್ಷಕರಿಂದಲೇ ಸಮಾಜ ಪರಿವರ್ತನೆ ಸಾಧ್ಯ

ತುಮಕೂರು: ಸರ್ಕಾರಿ ನೌಕರರಿಗೆ ಸಂಬಳ ಇಲ್ಲದೇ ಇದ್ದರೂ ಹೇಗೋ ನಡೆಯುತ್ತದೆ. ಆದರೆ  ಶಿಕ್ಷಕರಿಗೆ ಸಂಬಳವಿಲ್ಲದೆ ಇದ್ದರೆ ಜೀವನ ನಡೆಯುವುದಿಲ್ಲ. ಶಿಕ್ಷಕರ ಸಮಸ್ಯೆಗಳು ಏನು ಎಂಬುದು ನನಗೆ ಗೊತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗ ಜಾರಿ ಮಾಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು. ಭಾನುವಾರ ನಗರದಲ್ಲಿ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪಿ.ಆರ್. ಬಸವರಾಜು ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶಿಕ್ಷಕರಿಂದಲೇ ಸಮಾಜ ಪರಿವರ್ತನೆ ಸಾಧ್ಯ. ಹೀಗಾಗಿ ಶಿಕ್ಷಕರ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸುತ್ತೇನೆ’ ಎಂದು ಅವರು ಹೇಳಿದರು.  ಕಾನೂನು ಸುವ್ಯವಸ್ಥೆ ಕುಸಿದಿದೆ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಪ್ರಥಮ ಕರ್ತವ್ಯ. ಅದೊಂದು ಬಿಟ್ಟು ಉಳಿದಿದ್ದೆಲ್ಲ ಕೆಲಸವನ್ನೂ ಸರ್ಕಾರ ಮಾಡುತ್ತಿದೆ. ಈ ಸರ್ಕಾರದ ಮೇಲೆ ರಾಜ್ಯದ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.
 ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ  ರಾಜ್ಯ ಸರ್ಕಾರ ಮುಳುಗಿರುವುದರಿಂದಲೇ ಅತ್ಯಾಚಾರ, ದೌರ್ಜನ್ಯ, ಕೊಲೆ, ಸುಲಿಗೆ ಪ್ರಕರಣ ಹೆಚ್ಚಾಗಿವೆ. ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಇನ್ನಾದರೂ ಗಂಭೀರವಾಗಿ ಪರಿಗಣಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಒತ್ತಾಯಿಸಿದರು.