33 ಹೊಸ ತಾಲ್ಲೂಕು ರಚನೆಗೆ ಸಿಎಂ ಸಮ್ಮತಿ: ಕಾಗೋಡು ತಿಮ್ಮಪ್ಪ

33 ಹೊಸ ತಾಲ್ಲೂಕು ರಚನೆಗೆ ಸಿಎಂ ಸಮ್ಮತಿ: ಕಾಗೋಡು ತಿಮ್ಮಪ್ಪ

ಬೆಂಗಳೂರು: ರಾಜ್ಯದಲ್ಲಿ 33 ಹೊಸ ತಾಲ್ಲೂಕು ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ್ದು, ಮುಂದಿನ ಬಜೆಟ್‌ನಲ್ಲಿ ಹೊಸ ತಾಲೂಕುಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, 43 ಹೊಸ ತಾಲೂಕುಗಳನ್ನು ಮಾಡಬೇಕು ಎಂಬ ಬೇಡಿಕೆ ಇದೆ. ಆದರೆ, ಈ ಪೈಕಿ ಮೊದಲ ಆದ್ಯತೆಯಲ್ಲಿ   33 ಹೊಸ ತಾಲೂಕುಗಳನ್ನು ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಇದೇ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ  43 ತಾಲ್ಲೂಕುಗಳ ಹಣೆಬರಹವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಘೋಷಣೆ ಮಾಡಿದರೆ ಪ್ರಯೋಜನವೇನು? ತಾಲ್ಲೂಕು ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಲು ಅನುದಾನ ನೀಡುವುದು ಯಾರು? ಎಂದು ಮರು ಪ್ರಶ್ನೆ ಹಾಕಿದರು. ಹೊಸ ತಾಲ್ಲೂಕು ರಚನೆ ಸಂಬಂಧ ರಚಿಸಲಾಗಿದ್ದ ಸಮಿತಿಗಳು ನೀಡಿದ ವರದಿಯಲ್ಲಿ ಆದ್ಯತೆಗಳ ಮೇರೆಗೆ ತಾಲ್ಲೂಕು ರಚನೆಗೆ ಶಿಫಾರಸು ಮಾಡಲಾಗಿತ್ತು. ಮೊದಲ ಆದ್ಯತೆಯಲ್ಲಿರುವ ಹೆಸರುಗಳನ್ನಷ್ಟೇ ಸರ್ಕಾರ ಪರಿಗಣಿಸಲಿದೆ ಎಂದು ಕಾಗೋಡು ತಿಳಿಸಿದ್ದಾರೆ.